ಟಾಯ್ಲೆಟ್ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಅಡ್ಡಿ-ಸೀಮೆಎಣ್ಣೆ ಸುರಿದುಕೊಂಡು ಯುವತಿ ಆತ್ಮಹತ್ಯೆ

ದಾವಣಗೆರೆ: ಶೌಚಾಲಯ ನಿರ್ಮಾಣ ವಿಚಾರಕ್ಕೆ ನಡೆದ ಜಗಳದಲ್ಲಿ ಯುವತಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹರಪ್ಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅನ್ನಪೂರ್ಣ (21) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಯುವತಿಯ ಕುಟುಂಬದವರು ಗ್ರಾಮಪಂಚಾಯತ್ ಜಾಗದಲ್ಲಿ ಶೌಚಾಲಯ ಕಟ್ಟಿಸುತ್ತಿದ್ದರು. ಆ ಸ್ಥಳದಲ್ಲಿ ಶೌಚಾಲಯ ನಿರ್ಮಿಸಲು ಗ್ರಾಮ ಪಂಚಾಯತ್‍ನಿಂದ ವರ್ಕ್ ಅರ್ಡರ್ ಸಹ ಲಭಿಸಿತ್ತು. ಈ ಹಿನ್ನಲೆಯಲ್ಲಿ ಯುವತಿಯ ಕುಟುಂಬ ಸದಸ್ಯರು ಶೌಚಾಲಯ ನಿರ್ಮಾಣ ಮಾಡಲು ಮುಂದಾಗಿದ್ದರು.

ಶೌಚಾಲಯ ನಿರ್ಮಾಣ ಮಾಡುವ ಸ್ಥಳದ ಸ್ವಲ್ಪ ದೂರದಲ್ಲಿ ದೇವಾಲಯವಿದ್ದು, ಇದರಿಂದ ಈ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡುವುದು ಬೇಡ ಎಂದು ಗ್ರಾಮಸ್ಥರು ಗ್ರಾಮ ಪಂಚಾಯತ್‍ಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸೋಮವಾರ ಶೌಚಾಲಯ ನಿರ್ಮಾಣದ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಈ ಜಾಗದಲ್ಲಿ ನಿರ್ಮಾಣ ಮಾಡಬೇಡಿ ಎಂದು ಹೇಳಿದ್ದಾರೆ.

ಈ ವೇಳೆ ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದ ಹಲವು ವರ್ಷಗಳ ಬಳಿಕ ಈ ವರ್ಷ ನಮಗೆ ಶೌಚಾಲಯ ನಿರ್ಮಾಣಕ್ಕೆ ಅನುಮತಿ ಲಭಿಸಿದೆ. ಹೀಗಾಗಿ ನಾವು ಶೌಚಾಲಯ ನಿರ್ಮಾಣ ಮಾಡುತ್ತೇವೆ ಎಂದು ಅನ್ನಪೂರ್ಣ ಕುಟುಂಬಸ್ಥರು ಪ್ರತಿ ಉತ್ತರ ನೀಡಿದ್ದಾರೆ.

ಮಾತಿಗೆ ಮಾತು ಬೆಳೆದು ಅನ್ನಪೂರ್ಣ ತಂದೆ, ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಪಂಚಾಯತ್ ಅಧ್ಯಕ್ಷರ ಬೆಂಬಲಿಗರ ನಡುವೆ ಜಗಳ ಆರಂಭವಾಗಿದೆ. ಈ ಜಗಳದಲ್ಲಿ ಯುವತಿಯ ತಂದೆ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆದಿದೆ. ಇದರಿಂದ ಮನನೊಂದ ಅನ್ನಪೂರ್ಣ ತಮ್ಮ ಮನೆಗೆ ತೆರಳಿ ಪೊಲೀಸರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲೇ ಆತ್ಮಹತ್ಯೆ ಯತ್ನಿಸಿದ್ದಾರೆ.

ಅನ್ನಪೂರ್ಣ ಆತ್ಮ ಹತ್ಯೆಗೆ ಯತ್ನಿಸಿದನ್ನು ಕಂಡ ಕುಟುಂಬಸ್ಥರು ಆಕೆಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲು ಪ್ರಯತ್ನಿಸಿದ್ದಾರೆ, ಆದರೆ ತೀವ್ರ ಸುಟ್ಟಗಾಯಗಳಾಗಿದರಿಂದ ಅನ್ನಪೂರ್ಣ ಸಾವನ್ನಪ್ಪಿದ್ದಾರೆ.

ಸದ್ಯ ಅನ್ನಪೂರ್ಣ ಅವರ ಶವವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದು. ಶವಗಾರದ ಮುಂದೆ ಕುಟುಂಬಸ್ಥ ಅಕ್ರಂದನ ಮುಗಿಲು ಮುಟ್ಟಿದೆ. ಘಟನೆ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=UI_oUomu2wI

Comments

Leave a Reply

Your email address will not be published. Required fields are marked *