ವಿರೋಧದ ನಡುವೆಯೂ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ಉಡುಪಿ ಉದ್ಯಮಿಗೆ ನೀಡಿದ್ರು ಸಿಎಂ

ಉಡುಪಿ: ಹಲವು ಕಾನೂನು ಹೋರಾಟ ಮತ್ತು ಜನರ ಪ್ರತಿಭಟನೆಯ ನಡುವೆಯೇ ಸರ್ಕಾರ ಉಡುಪಿಯ ಸರ್ಕಾರಿ ಹೆರಿಗೆ ಆಸ್ಪತ್ರೆಯನ್ನು ಉದ್ಯಮಿ ಬಿ.ಆರ್ ಶೆಟ್ಟಿಗೆ ನೀಡಿತು. ಸ್ವತ: ಸಿಎಂ, ಆರೋಗ್ಯ ಸಚಿವರು ಬಂದು ಆಸ್ಪತ್ರೆ ಉದ್ಘಾಟಿಸಿ ಬಿ.ಆರ್.ಶೆಟ್ಟಿ ಅವರ ಕೆಲಸವನ್ನು ಹೊಗಳಿದರು.

ಉದ್ಯಮಿ ಬಿ.ಆರ್. ಶೆಟ್ಟಿ ಹಣ ಹೂಡಿರುವ ಸರ್ಕಾರಿ ಆಸ್ಪತ್ರೆಗೆ ಆರಂಭದಿಂದಲೂ ವಿರೋಧ ಕೇಳಿಬರುತ್ತಿತ್ತು. ಇದು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದ ಹೊಸ ಪ್ರಯೋಗ ಆಸ್ಪತ್ರೆ. ಬಿ.ಆರ್ ಶೆಟ್ಟಿಯವರು ತಮ್ಮ ತಾಯಿಯ ಸ್ಮರಣಾರ್ಥ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಸಿಕೊಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯ ಮೇಲ್ವಿಚಾರಣೆಯಲ್ಲಿ ಈ ಆಸ್ಪತ್ರೆಯ ನಿರ್ವಹಣೆ ನಡೆಯುತ್ತದೆ. ಆದರೆ ಈ ಆಸ್ಪತ್ರೆಗೆ ಸಿಬ್ಬಂದಿ ನೇಮಕ ಮತ್ತು ಎಲ್ಲಾ ಉಸ್ತುವಾರಿ ಶೆಟ್ಟರ ಬಿ.ಆರ್. ವೆಂಚರ್ಸ್ ಕೈಯ್ಯಲ್ಲೇ ಇರುತ್ತದೆ. ಸರ್ಕಾರಿ ಆಸ್ಪತ್ರೆ ಮತ್ತು ಅದಕ್ಕೆ ಸೇರಿದ ಮೂರು ಮುಕ್ಕಾಲು ಎಕರೆ ಸ್ಥಳವನ್ನು ಸರ್ಕಾರ ಖಾಸಗಿಯವರಿಗೆ ದಾನ ಮಾಡಿದೆ.

ದಶಕಗಳ ಹಿಂದೆ ದಾನಿ ಹಾಜೀ ಅಬ್ದುಲ್ ಸಾಹೇಬರು ಮಹಿಳಾ ಹೆರಿಗೆ ಹಾಗೂ ಮಕ್ಕಳ ಆಸ್ಪತ್ರೆಗಾಗಿ ಭೂಮಿ ಧಾನವಾಗಿ ಸರ್ಕಾರಕ್ಕೆ ನೀಡಿದ್ರು. ಆದ್ರೆ ಅದೇ ಭೂಮಿಯನ್ನು ಸರ್ಕಾರ ಈಗ ಖಾಸಗಿಯವರ ವಶಕ್ಕೆ ನೀಡಿ ಕೈತೊಳೆದು ಕೊಂಡಿದೆ. ಹಾಗಾಗಿ ಸಾಮಾಜಿಕ ವಲಯದಲ್ಲಿ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ, ಪ್ರತಿಭಟನೆ ನಡೆಯುತ್ತಿದೆ. ಆದ್ರೆ ಪ್ರತಿಭಟನೆ ನಡುವೆಯೇ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜೀ ಅಬ್ದುಲ್ ಸಾಹೇಬ್ ಆಸ್ಪತ್ರೆಯನ್ನು ದೀಪ ಬೆಳಗಿಸಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ್ರು. ಆಸ್ಪತ್ರೆ ಸರ್ಕಾರ ವಶದಲ್ಲೇ ಇರುತ್ತದೆ, ಖಾಸಗಿಯವರು ನಡೆಸುತ್ತಾರೆ ಅದರಲ್ಲೇನೂ ತಪ್ಪಿದೆ ಎಂದು ಪ್ರಶ್ನಿಸಿದರು.

ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ ಮಸೂದೆ ತರಲು ಹೊರಟು ವೈದ್ಯರ ಕೆಂಗಣ್ಣಿಗೆ ಗುರಿಯಾಗಿರುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮುತುವರ್ಜಿಯಲ್ಲೇ ಈ ಒಪ್ಪಂದ ಆಗಿದೆ. ಸ್ವತ: ಸಿಎಂ ಸಿದ್ದರಾಮಯ್ಯನವರೇ ಶಂಕುಸ್ಥಾಪನೆ ಮಾಡಿರುವ ಈ ಆಸ್ಪತ್ರೆ ಒಂದೇ ವರ್ಷದೊಳಗೆ ಉದ್ಘಾಟನೆಗೊಂಡಿದೆ.

ಚುನಾವಣಾ ನೀತಿ ಸಂಹಿತೆ ಸೇರಿದಂತೆ ಯಾವುದೇ ಅಡ್ಡಿ ಬರಬಾರದು ಎಂಬ ಕಾರಣಕ್ಕೆ ತರಾತುರಿಯಲ್ಲಿ ಉದ್ಘಾಟನೆ ನಡೆದಿದೆ. ಆರೋಗ್ಯ ಕ್ಷೇತ್ರದ ಖಾಸಗೀಕರಣ ಬಗ್ಗೆ ಸರ್ಕಾರದ ಈ ದ್ವಿಮುಖ ನೀತಿಗೆ ಖಂಡನೆ ವ್ಯಕ್ತವಾಗುತ್ತಿದೆ. ಸರಕಾರಿ ಆಸ್ಪತ್ರೆಯನ್ನು ಉಳಿಸಬೇಕು ಎಂದು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಮುಂದುವರಿಸಿದೆ. ಆಸ್ಪತ್ರೆಗೆ ಭೂಮಿ ದಾನ ಮಾಡಿದ್ದ ಹಾಜಿ ಅಬ್ದುಲ್ಲಾ ಸಾಹೇಬರ ಕುಟುಂಬಸ್ಥರು ಕೂಡಾ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈಗ ಜಿಲ್ಲಾ ಕೋರ್ಟ್ ಮೆಟ್ಟಿಲು ಏರಿದ್ದು, ಮುಂದೆ ಹೈಕೋರ್ಟ್ ನಲ್ಲೂ ಹೋರಾಟ ಮುಂದುವರಿಸುತ್ತೇವೆ ಎಂದು ಹೋರಾಟಗಾರ ಪಿ.ವಿ ಭಂಡಾರಿ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 4 ಇಂದಿರಾ ಕ್ಯಾಂಟೀನ್ ಗಳಿಗೆ ಸಿಎಂ ಶಿಲಾನ್ಯಾಸ ಮಾಡಿದರು. ಮಹಿಳಾ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಉಡುಪಿ ಜಿಲ್ಲೆಯನ್ನು ಬಯಲು ಮುಕ್ತ ಜಿಲ್ಲೆಯೆಂದು ಘೊಷಿಸಿದ್ರು.

ಇದೇ ವೇಳೆ, ಮದ್ಯ ನಿಷೇಧಿಸುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇಂದಿರಾ ಕ್ಯಾಂಟೀನ್ ಮತ್ತು ಅನ್ನಭಾಗ್ಯದ ಅಕ್ಕಿ ಸೂಪರ್ ಕ್ವಾಲಿಟಿಯದ್ದು ಎಂದು ಸಿಎಂ ಸರ್ಟಿಫಿಕೇಟ್ ಕೊಟ್ಟರು.

 

Comments

Leave a Reply

Your email address will not be published. Required fields are marked *