ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

ಉಡುಪಿ: ಕರಾವಳಿ ಭಾಗದ ಜನಪದ ಕಂಬಳ ಕ್ರೀಡೆಗೆ ಪೇಟಾ ಮತ್ತೆ ಅಡ್ಡಗಾಲು ಹಾಕಿರುವ ಹಿನ್ನೆಲೆಯಲ್ಲಿ ಪ್ರಾಣಿದಯಾ ಸಂಘದ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಣಿದಯಾ ಸಂಘದ್ದು ಯಾಕೋ ಅತಿಯಾಯ್ತು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೇಟಾದವರು ಸಮಗ್ರ ಅಧ್ಯಯನ ಮಾಡಲಿ. ಕೋಣಗಳ ಪಾಲನೆ ಪೋಷಣೆ ನಿಮಗೆ ಗೊತ್ತಾ? ಸಾವಿರಾರು ಕೋಣಗಳ ಬಲಿ ದಿನನಿತ್ಯ ನಡೆಯುತ್ತಿರುವಾಗ ಕಸಾಯಿಖಾನೆಯ ವಿರುದ್ಧ ಪೇಟಾ ಏನು ಮಾಡಿದೆ ಎಂದು ಪ್ರಶ್ನೆ ಮಾಡಿದ್ರು.

ಕಂಬಳ ಕರಾವಳಿ ಭಾಗಕ್ಕಿರುವ ಏಕೈಕ ಮನರಂಜನಾ ಕ್ರೀಡೆ. ನಾವು ಕುದುರೆ ರೇಸಿಗೆ ಹೋಗಲ್ಲ. ಪೇಟಾದವರು ಕುದುರೆ ರೇಸಿಗೆ ಹೋಗಿಲ್ವಾ? ಕುದುರೆಗೆ ಹೊಡೆಯೋದನ್ನು ನೀವು ನೋಡಿಲ್ವಾ ಎಂದು ಸವಾಲೆಸೆದರು.

ಪೇಟಾದವರು ಪ್ರಚಾರಕ್ಕೆ ಹೀಗೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ-ರಾಜ್ಯ ಸರಕಾರ ಹಿಂಸೆಯ ಪರವಾಗಿಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇವೆ. ಪೇಟಾದವರದ್ದು ಇದು ಬೇಜವಾಬ್ದಾರಿಯುತ ನಡವಳಿಕೆಯಾಗಿದೆ. ಎಲ್ಲದಕ್ಕೂ ಕೊನೆಯೆಂಬುದು ಇದೆ. ಸುಪ್ರೀಂ ಕೋರ್ಟ್ ಎಲ್ಲದಕ್ಕೂ ಕೊನೆಯನ್ನು ಮಾಡುತ್ತದೆ ಎಂದು ಡಿವಿಎಸ್ ಗೌಡ ಕಿಡಿಕಾರಿದ್ರು.

ಪೇಟಾ ಏನ್ ಹೇಳಿದೆ?: ಕಂಬಳದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಲೇರಲು ಪೇಟಾ ತೀರ್ಮಾನ ಮಾಡಿದೆ. ನಿನ್ನೆ ಮೂಡಬಿದ್ರೆಯಲ್ಲಿ ಕಂಬಳದ ಕೋಣಗಳಿಗೆ ಚಿತ್ರ ಹಿಂಸೆ ನೀಡಲಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಹಿಂಸೆ ರಹಿತ ಕಂಬಳ ನಡೆಸಬೇಕೆಂದು ಹೇಳಿದ್ರೂ ಈ ಆದೇಶ ಪಾಲನೆಯಾಗಿಲ್ಲ. ಕೋಣದ ಮೂಗಿಗೆ ಹಗ್ಗ ಹಾಕಿ ಹಿಂಸೆ ಕೊಡಲಾಗಿದೆ. ಅಲ್ಲದೆ ಕಂಬಳದ ಗದ್ದೆಯಲ್ಲಿ ಓಡಿಸುವಾಗ ಕೋಣಗಳಿಗೆ ಕೋಲಿನಿಂದ ಹೊಡೆದಿದ್ದಾರೆ.

ಕಂಬಳ ಮುಗಿಸಿ ಬಂದ ಮೇಲೆ ಕೋಣಗಳಿಗೆ ಉಸಿರಾಟಕ್ಕೂ ಕಷ್ಟವಾಗುತ್ತದೆ. ಇದ್ರಿಂದ ಈ ಕಂಬಳದಲ್ಲಿ ಪ್ರಾಣಿ ಹಿಂಸೆ ನಡೆಯುತ್ತದೆ. ಈ ವೇಳೆ ರಹಸ್ಯವಾಗಿ ಚಿತ್ರೀಕರಣ ಮಾಡಲಾಗಿದೆ. ಕೋಣಗಳನ್ನ ಹಿಂಸಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಫೋಟೋ ಮತ್ತು ವಿಡಿಯೋವನ್ನ ಕೋರ್ಟ್ ಗಮನಕ್ಕೆ ತರುತ್ತೇವೆ. ಇದನ್ನು ಬ್ಯಾನ್ ಮಾಡಲು ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕುತ್ತೇವೆ ಅಂತಾ ಪೇಟಾ ಸಂಸ್ಥೆ ಪ್ರಕಟಣೆ ಹೊರಡಿಸಿತ್ತು.

Comments

Leave a Reply

Your email address will not be published. Required fields are marked *