ಕರಾವಳಿಯಲ್ಲಿ ಮತ್ತೆ ಕಂಬಳ ಕೋಣಗಳ ಕಲರವ- 2ವರ್ಷಗಳ ನಂತರ ರಂಗೇರಿಸಿದ ಕಂಬಳ

ಮಂಗಳೂರು: ಕರಾವಳಿಯಲ್ಲಿ ಮತ್ತೆ ಕಂಬಳ ಕೋಣಗಳ ಕಲರವ ಆರಂಭವಾಗಿದ್ದು, ಕರಾವಳಿಯ ಜನಪದ ಕ್ರೀಡೆ ಕಂಬಳ ಮತ್ತೆ ರಂಗೇರಿಸಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ನಿಷೇಧವಾಗುತ್ತದೆ ಎಂದು ತೂಗುಗತ್ತಿಯಡಿ ಆತಂಕದಲ್ಲೇ ಕಾಲ ಕಳೆದಿದ್ದ ಕಂಬಳ ಅಭಿಮಾನಿಗಳು ಮತ್ತೆ ಕೋಣಗಳೊಂದಿಗೆ ಕಂಬಳಕ್ಕಿಳಿದಿದ್ದಾರೆ. ಈ ಬಾರಿಯ ಮೊದಲ ಕಂಬಳದಲ್ಲೇ ಕಂಬಳಾಭಿಮಾನಿಗಳು ವಿಜಯದ ಕೇಕೆ ಹಾಕಿದ್ದಾರೆ.

ಪ್ರತಿಭಟನೆ, ಹೋರಾಟ, ಸುಪ್ರೀಂಕೋರ್ಟಿನಲ್ಲಿ ವಾದ ಇನ್ನೇನು ಕಂಬಳ ನಿಷೇಧವಾಗುತ್ತೆ ಅನ್ನುವಷ್ಟರಲ್ಲಿ ರಾಷ್ಟ್ರಪತಿಯವರು ಸುಗ್ರೀವಾಜ್ಞೆ ಮೂಲಕ ಅನುಮತಿ ನೀಡಿದರು. 2 ವರ್ಷಗಳ ಬಳಿಕ ಮೊದಲ ವಿಜಯೋತ್ಸವ ಕಂಬಳ ಸಂಭ್ರಮ, ಸಡಗರದಿಂದ ಶನಿವಾರ ಬೆಳಗ್ಗೆ ಸಾಂಪ್ರದಾಯಿಕವಾಗಿ ಮೂಡುಬಿದಿರೆಯಲ್ಲಿ ನಡೆಯಿತು.

ಆರು ತಿಂಗಳ ಕಾಯುವಿಕೆಯ ನಂತರ ತಿದ್ದುಪಡಿ ಕಾಯಿದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದಿದ್ದು, ಈಗ ಕಂಬಳ ಕೂಡ ಅಧಿಕೃತಗೊಂಡಿದೆ. ಸುಪ್ರೀಂಕೋರ್ಟ್ ಹೋರಾಟದ ಬಳಿಕದ ಮೊದಲ ಕಂಬಳ ವಿಜಯೋತ್ಸವದ ರೂಪದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದಲ್ಲಿ ಶಾಸಕ ಅಭಯಚಂದ್ರ ಜೈನ್ ನೇತೃತ್ವದಲ್ಲಿ ಜೋಡುಕರೆ ಕಂಬಳ ಅದ್ಧೂರಿಯಾಗಿ ಆರಂಭಗೊಂಡಿದೆ. ಉಭಯ ಜಿಲ್ಲೆಗಳಿಂದ ಸುಮಾರು 130 ಕ್ಕೂ ಹೆಚ್ಚಿನ ಜೋಡಿ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಹೇಳಿದ್ದಾರೆ.

ಮೂಡಬಿದಿರಿಯ ಕಂಬಳದಲ್ಲಿ ಕಂಬಳ ಪ್ರಿಯರು ಸಂಭ್ರಮದಲ್ಲಿದ್ದರು. ಕಂಬಳದ ಉಳಿವಿಗೆ ಶ್ರಮಿಸಿದವರನ್ನು ಗದ್ದೆಯಲ್ಲೇ ಗೌರವಿಸಲಾಯಿತು. ಒಟ್ಟಿನಲ್ಲಿ ಕರಾವಳಿಯ ಜಾನಪದ ಕ್ರೀಡೆಯ ಸಂಭ್ರಮ ಮತ್ತೆ ಮೇಳೈಸಿದೆ ಎಂದು ಕಂಬಳ ಕೋಣದ ಮಾಲೀಕ ರಾಬರ್ಟ್ ತಿಳಿಸಿದ್ದಾರೆ.

2015-16 ರ ಮಾರ್ಚ್ 14 ರಂದು ಉಪ್ಪಿನಂಗಡಿಯಲ್ಲಿ ನಡೆದ ಕಂಬಳ ಕೊನೆಯ ಕಂಬಳವಾಗಿತ್ತು. ಆ ಬಳಿಕ ಕಂಬಳ ಕ್ರೀಡೆಗೆ ನಿಷೇಧವಾದ ಕಾರಣ ಕಂಬಳ ಕ್ರೀಡೆ ನಡೆದಿರಲಿಲ್ಲ. ಇದೀಗ ಸುಗ್ರೀವಾಜ್ಞೆ ಮೂಲಕ ಕಂಬಳ ಗ್ರೀನ್ ಸಿಗ್ನಲ್ ಸಿಕ್ಕಿದ್ದು, 1 ವರ್ಷ 8 ತಿಂಗಳ ಬಳಿಕ ಮೂಡುಬಿದಿರೆಯಲ್ಲಿ ಕೋಟಿ-ಚೆನ್ನಯ ಕಂಬಳ ನಡೆಸುವ ಮೂಲಕ ಕಂಬಳ ಸೀಸನ್ ಆರಂಭವಾಯಿತು.

Comments

Leave a Reply

Your email address will not be published. Required fields are marked *