ಜೊಲ್ಲು ಸುರಿಸುತ್ತಾ ಕಾಯಿಲೆಯಿಂದ ನರಳುತ್ತಿರುವ ಕಾಮಧೇನು- ಕೊಟ್ಟಿಗೆಯಲ್ಲೇ ಪ್ರಾಣಬಿಟ್ಟ ಹಸುಗಳು!

ಕೋಲಾರ: ಹೈನೋದ್ಯಮವನ್ನೇ ನಂಬಿ ಬದುಕುತ್ತಿರುವ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಕಾಲು ಬಾಯಿ ರೋಗ ಗೋಪಾಲಕರಿಗೆ ನಡುಕ ಹುಟ್ಟಿಸಿತ್ತು. ಹೀಗಿರುವಾಗ ಆ ಜಿಲ್ಲೆಯಲ್ಲಿ ಹಸುಗಳ ಸರಣಿ ಸಾವು ಮತ್ತೆ ಗೋಪಾಲಕರನ್ನು ಆತಂಕಕ್ಕೆ ದೂಡಿದೆ. ಆ ಜಿಲ್ಲೆಯಲ್ಲಿ ಮಾರಕ ರೋಗ ಕಾಣಿಸಿಕೊಂಡಿರುವುದು ರೈತರ ನಿದ್ದೆಗೆಡಿಸಿದೆ.

ಮೂರು ವರ್ಷಗಳ ಹಿಂದೆ ಕಾಲುಬಾಯಿ ರೋಗದ ರುದ್ರನರ್ತನಕ್ಕೆ ಕೋಲಾರ ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಹಸುಗಳು ಪ್ರಾಣಬಿಟ್ಟಿದ್ದವು. ಆ ಕಹಿ ನೆನೆಪು ಮಾಸುವ ಮುನ್ನವೇ ಮೂರಾಂಡಹಳ್ಳಿ ಗ್ರಾಮದಲ್ಲಿ ಕಾಲುಬಾಯಿ ರೋಗ ವಕ್ಕರಿಸಿಕೊಂಡಿದೆ. ಕಳೆದ ಒಂದು ತಿಂಗಳಲ್ಲಿ ಕಾಲುಬಾಯಿ ರೋಗಕ್ಕೆ 10 ಹಸುಗಳು ಸಾವನ್ನಪ್ಪಿವೆ. ಹತ್ತಾರು ಹಸುಗಳು ರೋಗದಿಂದ ನರಳುತ್ತಿವೆ. ಹೀಗಾಗಿ ಹೈನೋದ್ಯಮವನ್ನು ನಂಬಿರುವ ರೈತರು ಆತಂಕದಲ್ಲಿದ್ದಾರೆ.

ಪಶುಸಂಗೋಪನಾ ಇಲಾಖೆ ಸರಿಯಾದ ಸಮಯಕ್ಕೆ ಲಸಿಕೆ ಹಾಕದೇ ಇರೋದು ಕಾಲುಬಾಯಿ ರೋಗಕ್ಕೆ ಕಾರಣ ಅನ್ನೋದು ರೈತರ ಆರೋಪ. ಸರ್ಕಾರ ಕೂಡ ಸರಿಯಾದ ಪರಿಹಾರ ನೀಡುತ್ತಿಲ್ಲ. ಲಕ್ಷಾಂತರ ಮೌಲ್ಯದ ಹಸುಗಳಿಗೆ ಹತ್ತು ಸಾವಿರ ರೂಪಾಯಿ ಕೊಡುತ್ತಿದ್ದಾರೆ. ಕರುಗಳು ಸತ್ತರೆ ಅದಕ್ಕೆ ಯಾವುದೇ ಪರಿಹಾರ ಕೊಡುತ್ತಿಲ್ಲ ಎಂದು ಗೋಪಾಲಕರು ತಮ್ಮ ಅಳಲುತೋಡಿಕೊಂಡಿದ್ದಾರೆ. ಆದರೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾತ್ರ ಎಲ್ಲ ಮಾಡಿದ್ದೀವಿ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಹಸುಗಳ ಮಾರಣಹೋಮ ನಡೆಯೋ ಮುನ್ನಾ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ.

 

Comments

Leave a Reply

Your email address will not be published. Required fields are marked *