ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ: ಇಳಿಕೆಯಾಗಲಿದೆ 178 ದಿನಬಳಕೆಯ ವಸ್ತುಗಳ ಬೆಲೆ

ಗುವಾಹಟಿ: ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ. ನೀವು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಇನ್ನು ಮುಂದೆ ಇಳಿಕೆಯಾಗಲಿವೆ. ಬರೋಬ್ಬರೀ 178 ದಿನಬಳಕೆ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 10%ರಷ್ಟು ಇಳಿಕೆಯಾಗಿದೆ.

28% ರಷ್ಟಿದ್ದ ಜಿಎಸ್‍ಟಿ ತೆರಿಗೆಯನ್ನು 18%ಕ್ಕೆ ಇಳಿಸಲಾಗಿದೆ. ಶುಕ್ರವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 23ನೇ ಸಭೆಯಲ್ಲಿ 178 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು 18% ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ 28% ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರೆಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ, ಒಟ್ಟು 178 ವಸ್ತುಗಳ ಮೇಲಿನ ತೆರಿಗೆಯನ್ನು 18% ಇಳಿಸಲಾಗಿದ್ದು, ನವೆಂಬರ್ 15 ರಿಂದ ಪರಿಷ್ಕೃತ ತೆರಿಗೆ ಜಾರಿಯಾಗಲಿದೆ ಎಂದು ತಿಳಿಸಿದರು.

ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಪ್ರತಿಕ್ರಿಯಿಸಿ, ಗ್ರಾನೈಟ್, ಮಾರ್ಬಲ್, ಚಾಕ್ಲೇಟ್, ಚೂಯಿಂಗ್‍ಗಮ್, ವಾಚ್, ಬ್ಲೇಡ್, ಸ್ಟೌ, ಸೌಂದರ್ಯವರ್ಧಕಗಳು, ಶಾಂಪು ಮೇಲಿನ ತೆರಿಗೆಯನ್ನು ಇಳಿಸಲಾಗಿದೆ ಎಂದು ತಿಳಿಸಿದರು.

ಪೇಂಟ್, ಸೀಮೆಂಟ್ ಜೊತೆ ಲಕ್ಷುರಿ ಉತ್ಪನ್ನಗಳಾದ ವಾಶಿಂಗ್ ಮಶೀನ್, ಏರ್ ಕಂಡಿಷನ್ ಸೇರಿದಂತೆ 50 ಉತ್ಪನ್ನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ 28% ತೆರಿಗೆಯನ್ನು ಮುಂದುವರಿಸಲಾಗಿದೆ. ಸೆಣಬು ಮತ್ತು ಹತ್ತಿಯ ಕೈ ಚೀಲಗಳ ಮೇಲಿನ ತೆರಿಗೆಯನ್ನು 18% ರಿಂದ 12% ಕ್ಕೆ ಇಳಿಸಲಾಗಿದೆ.

ಮುಂದಿನ ದಿನಗಳಲ್ಲಿ 28% ತೆರಿಗೆ ವಿಧಿಸುವ ವಸ್ತುಗಳು 18% ತೆರಿಗೆ ವ್ಯಾಪ್ತಿಗೆ ಬರಲಿದೆ. ಈಗಲೇ ಈ ವಸ್ತುಗಳ ಮೇಲೆ ತೆರಿಗೆ ಇಳಿಸಿದರೆ ಆದಾಯ ಸಂಗ್ರಹಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂದು ಸುಶೀಲ್ ಮೋದಿ ತಿಳಿಸಿದರು.

ಜುಲೈ ಒಂದರಂದು ದೇಶದಲ್ಲಿ ಜಿಎಸ್‍ಟಿ ಜಾರಿಯಾಗಿದ್ದು, ವಸ್ತುಗಳ ಮೇಲೆ 0%, 5%, 12%, 18%, 28% ತೆರಿಗೆ ವಿಧಿಸಲಾಗುತ್ತಿದೆ.

 

 

Comments

Leave a Reply

Your email address will not be published. Required fields are marked *