ಮೂರು ದಿನಗಳ ಹಂಪಿ ಉತ್ಸವಕ್ಕೆ ಅದ್ಧೂರಿ ತೆರೆ -ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಉತ್ಸವ ಭಾನುವಾರ ಮುಕ್ತಾಯಗೊಂಡಿತು. ಕೊನೆಯ ದಿನದ ಕಾರ್ಯಕ್ರಮಗಳು ನಡೆಯುವ ವೇಳೆಯೇ ಧಾರಾಕಾರವಾಗಿ ಮಳೆ ಸುರಿಯಿತು.

ಕಳೆದ ಮೂರು ದಿನಗಳಿಂದ ಸಂಭ್ರಮ ಸಡಗರದಿಂದ ನಡೆದ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ತೆರೆ ಬಿದ್ದಿದೆ. ಲಕ್ಷಾಂತರ ಪ್ರೇಕ್ಷಕರ ಸಮ್ಮುಖದಲ್ಲಿ ಕೊನೆಯ ದಿನ ಅದ್ಧೂರಿಯಾಗಿ ಕಾರ್ಯಕ್ರಮಗಳು ಜರುಗಿದವು. ಮೈಸೂರಿನ ಕಾರಂಜಿ ಪೌಂಡೇಷನ್ ವಿಕಲಚೇತನ ಮಕ್ಕಳೊಂದಿಗೆ ಹೆಜ್ಜೆಹಾಕಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಕ್ಕಳ ನೃತ್ಯ ನೋಡಿ ಭಾವುಕರಾಗಿ ಕಣ್ಣೀರಿಟ್ಟರು.

ಗಾಯತ್ರಿ ವಿದ್ಯಾಪೀಠ ವೇದಿಕೆ ಮುಂಭಾಗದ ವಿವಿಐಪಿ ಗ್ಯಾಲರಿಯಲ್ಲಿ ಕುಳಿತಿದ್ದ ಹಂಪಿ ಕನ್ನಡ ವಿವಿ ಕುಲಪತಿ ಅವರನ್ನು ಪೊಲೀಸರು ಎಬ್ಬಿಸಿ ಹೊರಗೆ ಕಳುಹಿಸಿದ್ರು. ಇದರಿಂದ ರೊಚ್ಚಿಗೆದ್ದ ವಿವಿ ಕುಲಪತಿ ಮಲ್ಲಿಕಾ ಘಂಟಿ ಇದೂ ಜನೋತ್ಸವವಲ್ಲ ಅಧಿಕಾರಿಗಳ ಉತ್ಸವವೆಂದು ಕಿಡಿಕಾರಿದರು.

ರಾತ್ರಿ 10:30ಕ್ಕೆ ಆರಂಭವಾದ ಧಾರಾಕಾರ ಮಳೆಯಿಂದ ಗಾಯತ್ರಿ ವಿದ್ಯಾಪೀಠ, ಎಂಪಿ ಪ್ರಕಾಶ ವೇದಿಕೆ ಸೇರಿದಂತೆ 11 ವೇದಿಕೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ಅರ್ಧಕ್ಕೆ ಸ್ಥಗಿತಗೊಂಡವು. ಧಾರಕಾರವಾಗಿ ಮಳೆ ಸುರಿದ ಪರಿಣಾಮ ಮಳೆಯಿಂದ ರಕ್ಷಿಸಿಕೊಳ್ಳಲು ಪ್ರೇಕ್ಷಕರು ಕುರ್ಚಿಗಳನ್ನೇ ಛತ್ರಿಗಳನ್ನಾಗಿ ಬಳಸಿಕೊಂಡರು. ಎಂಪಿ ಪ್ರಕಾಶ್ ವೇದಿಕೆಯಲ್ಲಿ ಮನೋಮೂರ್ತಿ ಹಾಗೂ ಸಂಗಡಿಗರು ನೀಡಿದ ರಸಮಂಜರಿ ಕಾರ್ಯಕ್ರಮ ಹಾಗೂ ಗಾಯತ್ರಿ ವಿದ್ಯಾಪೀಠ ವೇದಿಕೆಯಲ್ಲಿ ನೀತಿ ಮೋಹನ್ ನೀಡಿದ ಕಾರ್ಯಕ್ರಮದಲ್ಲಿ ಯುವಕರು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.

ಕೊನೆಯ ದಿನ ನಡೆದ ಮಾಡಲ್‍ಗಳ ರ್ಯಾಂಪ ವಾಕ್ ಹಾಗೂ ಸಾಂಪ್ರದಾಯಿಕ ಉಡುಪು ಪ್ರದರ್ಶನ ಎಲ್ಲರ ಗಮನ ಸೆಳೆಯುವಲ್ಲಿ ಯಶ್ವಸಿಯಾಯ್ತು. ಮೂರು ದಿನಗಳ ಉತ್ಸವದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಭಾಗವಹಿಸಿರುವುದರಿಂದ ಈ ಬಾರಿ ದಾಖಲೆ ನಿರ್ಮಾಣವಾಗಿದೆ.

Comments

Leave a Reply

Your email address will not be published. Required fields are marked *