ನ.3 ರಂದು ಕರ್ನಾಟಕದ ಖಾಸಗಿ ಆಸ್ಪತ್ರೆ ವೈದ್ಯರಿಂದ ಮುಷ್ಕರ

ಬೆಂಗಳೂರು: ದುಬಾರಿ ಶುಲ್ಕ ವಿಧಿಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕಲು `ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2017′ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ನವೆಂಬರ್ 3 ರಂದು ಮುಷ್ಕರ ನಡೆಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ವೈದ್ಯ ಸಂಘದ ಅಧ್ಯಕ್ಷ ಡಾ. ರವೀಂದ್ರ, ಇದೇ ವಿಚಾರವಾಗಿ ಜೂನ್ 16 ರಂದೇ ಪ್ರತಿಭಟನೆ ನಡೆಸಿದ್ದೇವೆ. ಅಂದು ಸಿಎಂ ಸೇರಿದಂತೆ ಆರೋಗ್ಯ ಸಚಿವರನ್ನೂ ಸಹ ಭೇಟಿ ಮಾಡಿದ್ದು, ಆದರೆ ಅವರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ನವೆಂಬರ್ 3 ರಂದು ನಾವು ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಈಗ ಹೊಸದಾಗಿ ಕುಂದು ಕೊರತೆ ಪರಿಹಾರ ಸಮಿತಿ ಜಾರಿ ತರಲು ನಿರ್ಧಾರ ಮಾಡಿದ್ದಾರೆ. ಆದರೆ ಇದರಲ್ಲಿ ಯಾವ ವೈದ್ಯರ ವಿರುದ್ಧ ದೂರು ಹೂಡಿದ್ದಾರೋ, ಆ ವೈದ್ಯರು ಲಾಯರ್ ನೇಮಕ ಮಾಡುವ ಹಾಗಿಲ್ಲ. ಅಂದರೆ ಕಸಬ್ ನಂತಹ ದೇಶ ದ್ರೋಹಿಗೆ ಲಾಯರ್ ಇಟ್ಟುಕೊಳ್ಳಲು ಅವಕಾಶ ಇರುವ ನಮ್ಮ ದೇಶದಲ್ಲಿ, ವೈದ್ಯರಿಗೆ ಯಾಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ವೈದ್ಯರಿಗೆ ದಂಡ ಹಾಗೂ ಜೈಲಿಗಟ್ಟುವ ನೀವು ವೈದ್ಯರಿಗೆ ಯಾವ ರೀತಿ ಗೌರವ ನೀಡುತ್ತೀರಾ? ನವೆಂಬರ್ 3 ರಂದು ಸಾಂಕೇತಿಕವಾಗಿ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ. ಸರ್ಕಾರ ಆಗಲೂ ಮಾತುಕತೆಗೆ ಮುಂದಾಗದಿದ್ದರೆ. ನವೆಂಬರ್ 9 ಮತ್ತು 10 ರಂದು ವೈದ್ಯ ವೃತ್ತಿಯನ್ನು ತ್ಯಜಿಸುತ್ತೇವೆ. ಕರ್ನಾಟಕದಲ್ಲಿ 40 ರಿಂದ 50 ಸಾವಿರ ಖಾಸಗಿ ಆಸ್ಪತ್ರೆಗಳಿವೆ. ಆದರೆ ಸರ್ಕಾರಿ ಆಸ್ಪತ್ರೆಯನ್ನೇ ಸರಿಯಾಗಿ ವ್ಯವಸ್ಥಿತವಾಗಿ ಕಾಪಾಡಿಕೊಳ್ಳದ ಸರ್ಕಾರ, ಖಾಸಗಿ ಆಸ್ಪತ್ರೆಯತ್ತ ಬೊಟ್ಟುಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಅವರೂ ವೈದ್ಯರೇ, ನಾನು ಅವರ ಜೊತೆಯಲ್ಲಯೂ ಮಾತನಾಡಿದ್ದೇನೆ. ಆಯಾಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತೇವೆ. ಯಾವುದೇ ಶಸ್ತ್ರ ಚಿಕಿತ್ಸೆ ನಡೆಸುವುದಿಲ್ಲ. ಸರ್ಕಾರಿ ಆಸ್ಪತ್ರೆ ಸರಿ ಇದ್ದಿದ್ದರೆಜನರು ಏಕೆ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ನಮ್ಮ ಪ್ರತಿಭಟನೆ ವಿಚಾರವನ್ನು ಯತೀಂದ್ರ ಅವರು ತಂದೆಯ ಜೊತೆಗೆ ಮಾತಾನಾಡೋದಾಗಿ ಹೇಳಿದ್ದಾರೆಂದು ರವೀಂದ್ರ ಅವರು ತಿಳಿಸಿದ್ದಾರೆ.

ಮಗ ಯತೀಂದ್ರ ಮಾತಿಗೆ ಮಣಿದ ಸಿಎಂ ಸಿದ್ದರಾಮಯ್ಯ ಈಗ ಮಾತುಕತೆಗೆ ಮುಂದಾಗಿದ್ದು, ನವೆಂಬರ್ 2 ರಂದು 10 ಗಂಟೆಯ ವೇಳೆಗೆ ವೈದ್ಯರ ಜೊತೆ ಮಾತುಕತೆಗೆ ಅವಕಾಶ ನೀಡಿದ್ದಾರೆ.

Comments

Leave a Reply

Your email address will not be published. Required fields are marked *