ದೀಪಾಲಂಕಾರದಿಂದ ಕಂಗೊಳಿಸತ್ತಿರೋ ಬೀದರ್ ರೈಲ್ವೇ ನಿಲ್ದಾಣದಲ್ಲಿ ಸೆಲ್ಫಿ ಕ್ರೇಜ್

– ನೂತನ ಕಲಬುರಗಿ-ಬೀದರ್ ರೈಲು ಮಾರ್ಗಕ್ಕೆ ಇಂದು ಮೋದಿ ಚಾಲನೆ

ಕಲಬುರಗಿ: ರಾಜ್ಯಕ್ಕೆ ಮೋದಿ ಆಗಮನವಾಗುತ್ತಿರೋ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ನಡೆದಿವೆ. ಮೋದಿ ಬರುವ ಪ್ರಯುಕ್ತ ರಾಜ್ಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮೋದಿ ಭೇಟಿ ನೀಡುವ ಸ್ಥಳಗಳೆಲ್ಲಾ ಶೃಂಗಾರಗೊಂಡು ಜಗಮಗಿಸುತ್ತಿವೆ.

ಬೆಂಗಳೂರಿನಿಂದ ಪ್ರಧಾನಿ ಮೋದಿ ಅವರು ವಿಶೇಷ ವಿಮಾನದ ಮೂಲಕ ಬೀದರ್‍ಗೆ ಬಂದು ಮೂರು ದಶಕಗಳ ಹಿಂದೆ ಘೋಷಿಸಲಾಗಿದ್ದ ಕಲಬುರಗಿ-ಬೀದರ್ ರೈಲು ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದು ಈ ರೈಲು ಮಾರ್ಗವನ್ನು ಪ್ರಧಾನಿ ಮೋದಿಯವರು ಲೋಕಾರ್ಪಣೆ ಮಾಡಲಿದ್ದು, ಈ ಹಿನ್ನೆಲೆ ಪ್ರಯುಕ್ತ ರೈಲ್ವೇ ನಿಲ್ದಾಣ ಸಂಪೂರ್ಣವಾಗಿ ದೀಪಾಲಂಕಾರದಿಂದ ಶೃಂಗಾರಗೊಂಡು ಹೊಳೆಯುತ್ತಿದೆ.

ಇತಿಹಾಸದಲ್ಲೇ ಎಂದು ನೋಡದ ದೀಪಾಲಂಕಾರ ನೋಡಿ ಗಡಿ ಜಿಲ್ಲೆಯ ಬೀದರ್ ಮಂದಿ ಸೆಲ್ಫಿ ತೆಗೆದುಕೊಳ್ಳಲು ರೈಲ್ವೇ ನಿಲ್ದಾಣಕ್ಕೆ ಮುಗಿಬಿದ್ದಿದ್ದಾರೆ. ಪ್ರವಾಸಿ ಮಂದಿರವಾಗಿ ಬದಲಾಗಿರುವ ರೈಲ್ವೇ ನಿಲ್ದಾಣದ ಮುಂದೆ ಕುಟಂಬದ ಜೊತೆ ಹಾಗೂ ಗೆಳೆಯರ ಜೊತೆ ಬಂದು ಸೆಲ್ಫಿ ತೆಗೆದುಕೊಂಡು ಖುಷಿಯಿಂದ ವಾಪಸ್ಸಾಗುತ್ತಿದ್ದಾರೆ.

ನೂತನ ರೈಲಿಗೆ ಹಸಿರು ನಿಶಾನೆ ತೋರಿ ನಂತರ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಅವರ ಆಗಮನ ಹಿನ್ನೆಲೆಯಲ್ಲಿ ಬೀದರ್ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಬೀದರ್‍ನಿಂದ ಕಲಬುರಗಿಗೆ ಸುಮಾರು 110 ಕಿ.ಮೀ. ಉದ್ದ ಹೊಸ ರೈಲು ಸಂಚಾರ ಮಾರ್ಗ ನಿರ್ಮಾಣವಾಗಿದ್ದು, ಇದು 2000ನೇ ಇಸವಿಯಲ್ಲಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರದಿಂದ ಪ್ರಾರಂಭವಾಗಿದೆ. ಈ ಯೋಜನೆ ಮುಕ್ತಾಯವಾಗಲು ಬರೋಬ್ಬರಿ 17 ವರ್ಷ ಬೇಕಾಗಿದೆ. ಒಟ್ಟು 1,542 ಕೋಟಿ ರೂ. ವೆಚ್ಚದಿಂದ ಸುಮಾರು 1.67 ಕಿ.ಮೀ. ಸುರಂಗ ಮಾರ್ಗಕ್ಕೆ 70 ಕೋಟಿ ರೂ. ಖರ್ಚು ಮಾಡಲಾಗಿದೆ.

ಕಾಂಗ್ರೆಸ್ ಅಸಮಾಧಾನ: ಬೀದರ್‍ನ ರೈಲು ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಯೋಜನೆಗೆ ಶ್ರಮಿಸಿದ ನಮಗೆ ಸೌಜನ್ಯಕ್ಕೂ ಆಹ್ವಾನ ನೀಡಿಲ್ಲ ಅಂತಾ ಕೇಂದ್ರದ ಮಾಜಿ ರೈಲ್ವೇ ಸಚಿವ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಇನ್ನು ಈ ಯೋಜನೆಗೆ ಮೊದಲಿಗೆ ಕಲಬುರಗಿ-ಬೀದರ್ ಅಂತ ಹೆಸರಿಡಲಾಗಿತ್ತು. ಆದರೆ ಖರ್ಗೆ ಅವರನ್ನು ಮೂಲೆಗುಂಪು ಮಾಡಲೆಂದೇ ಬೀದರ್-ಕಲಬುರಗಿ ಅಂತ ಹೆಸರನ್ನು ಬದಲಿಸಲಾಗಿದೆ ಅಂತ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ದೂರಿದ್ದಾರೆ. ಸಿಎಂ ಸಹ ಆಹ್ವಾನ ಬಂದಿಲ್ಲ. ಜಾಗ ರಾಜ್ಯದ್ದು, ಹಣ ರಾಜ್ಯದ್ದು, ಉದ್ಘಾಟನೆ ಮಾತ್ರ ಮೋದಿ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *