ಪತ್ನಿ ಮೇಲಿನ ಸಿಟ್ಟಿಗೆ ಅಳಿಯನಿಂದಲೇ ಅತ್ತೆ ಮಾವನಿಗೆ ಮಚ್ಚಿನೇಟು

ತುಮಕೂರು: ಪತ್ನಿಯ ಮೇಲಿನ ಸಿಟ್ಟಿಗೆ ಅಳಿಯನೊಬ್ಬ ಅತ್ತೆ ಮಾವನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಶಿರಾ ತಾಲೂಕಿನ ಬೀರನಹಳ್ಳಿಯಲ್ಲಿ ನಡೆದಿದೆ.

ಅತ್ತೆ ಲಕ್ಷ್ಮಮ್ಮ (50), ಮಾವ ಲಿಂಗಣ್ಣ(55) ಅಳಿಯನಾದ ಕೃಷ್ಣಪ್ಪನಿಂದ ಹಲ್ಲೆಗೊಳಗಾದವರು. ಸದ್ಯಕ್ಕೆ ದಂಪತಿಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ಲಕ್ಷ್ಮಮ್ಮ ಮತ್ತು ಲಿಂಗಣ್ಣ ತಮ್ಮ ಮಗಳಾದ ಭಾಗ್ಯಮ್ಮ ಅವರನ್ನು ಸುಮಾರು 7 ವರ್ಷಗಳ ಹಿಂದೆ ಆಂಧ್ರ ಮೂಲದ ಕೃಷ್ಣಪ್ಪನಿಗೆ ಮದುವೆ ಮಾಡಿಕೊಟ್ಟಿದ್ದರು. ಕೃಷ್ಣಪ್ಪ ದಿನಗೂಲಿ ಕೆಲಸ ಮಾಡಿಕೊಂಡಿದ್ದ. ಹೆಣ್ಣು ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದು, ಚುಡಾಯಿಸುವುದು ಮಾಡುತ್ತಿದ್ದ. ಇವನ ನಡವಳಿಕೆ ನೋಡಿ ಜನರು ಕಂಬಕ್ಕೆ ಕಟ್ಟಿ ಹೊಡೆದು ಎಚ್ಚರಿಕೆಯನ್ನೂ ಸಹ ನೀಡಿದ್ದರು. ಆದರೂ ಈತ ಮತ್ತೆ ಅದೇ ರೀತಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಪತಿಯ ಈ ರೀತಿಯ ವರ್ತನೆಯಿಂದ ಬೇಸತ್ತ ಭಾಗ್ಯಮ್ಮ ಎರಡು ತಿಂಗಳ ಹಿಂದೆ ಅವನನ್ನು ಬಿಟ್ಟು ತನ್ನ ಇಬ್ಬರು ಮಕ್ಕಳ ಜೊತೆ ತವರು ಮನೆಗೆ ಬಂದಿದ್ದಾರೆ. ಪತ್ನಿಗೆ ಮನೆಗೆ ಬರುವಂತೆ ಕೃಷ್ಣಪ್ಪ 2-3 ಬಾರಿ ಬಂದು ಕರೆದಿದ್ದಾನೆ. ಆದರೆ ಭಾಗ್ಯಮ್ಮ ಇದಕ್ಕೆ ಒಪ್ಪಲಿಲ್ಲ. ಬುಧವಾರ ಮತ್ತೆ ಹೆಂಡತಿಯ ತವರು ಮನೆಗೆ ಬಂದ ಕೃಷ್ಣಪ್ಪ, ಪತ್ನಿಯ ಮೇಲಿನ ಸಿಟ್ಟನ್ನು ಮಲಗಿದ್ದ ಅತ್ತೆ- ಮಾವರ ಮೇಲೆ ತೋರಿಸಿದ್ದು, ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ ಲಕ್ಷ್ಮಮ್ಮ ಹಾಗೂ ಲಿಂಗಣ್ಣರ ತಲೆ, ಕೈ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಈ ಘಟನೆ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕೃಷ್ಣಪ್ಪ ಪರಾರಿಯಾಗಿದ್ದಾನೆ.

Comments

Leave a Reply

Your email address will not be published. Required fields are marked *