ದೇಶದಲ್ಲೇ ಪ್ರಪ್ರಥಮ ಬಾರಿಗೆ ಸ್ವದೇಶಿ ಝೈರೋಕಾಪ್ಟರ್ ನಿರ್ಮಿಸಿರೋ ಕೊಡಗಿನ ವಿದ್ಯಾರ್ಥಿಗಳು- ಹಾರಾಟಕ್ಕೆ ಸಿಕ್ತಿಲ್ಲ ರನ್ ವೇ

ಮಡಿಕೇರಿ: ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಬಲ ನೀಡಿದ್ದಾರೆ. ನಮ್ಮ ಕೊಡಗಿನ ವಿದ್ಯಾರ್ಥಿಗಳು ಸ್ವದೇಶಿ ನಿರ್ಮಿತ ಝೈರೋ ಕಾಪ್ಟರ್ ನಿರ್ಮಾಣ ಮಾಡಿದ್ದಾರೆ. ಆದರೆ ಪ್ರಾಯೋಗಿಕ ಹಾರಾಟಕ್ಕೆ ರನ್ ವೇ ಕೇಳಿದರೆ ಅವಕಾಶವೇ ಸಿಗುತ್ತಿಲ್ಲ.

ಕೊಡಗು ಜಿಲ್ಲೆ ವಿರಾಜಪೇಟೆಯ ಕೂರ್ಗ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಆವಿಷ್ಕಾರ ಮಾಡಿದ್ದಾರೆ. ಮೆಕಾನಿಕಲ್ ವಿಭಾಗದ ನಾಲ್ವರು ವಿದ್ಯಾರ್ಥಿಗಳಾದ ಲಿತಿನ್, ಗಣೇಶ್, ಶಿವಕುಮಾರ್ ಮತ್ತು ಅಮಿತ್ 2 ವರ್ಷ ಹಗಲಿರುಳು ಶ್ರಮಿಸಿ ಝೈರೋ ಕಾಪ್ಟರ್ ನಿರ್ಮಿಸಿದ್ದಾರೆ. ದೇಶದಲ್ಲೇ ಪ್ರಪ್ರಥಮ ಬಾರಿಗೆ ಸ್ವದೇಶಿ ಕಾಪ್ಟರ್ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಒಟ್ಟು ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗಿದ್ದು, ಶಿಕ್ಷಣ ಸಂಸ್ಥೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದೆ.

ದೇಶದಲ್ಲಿ ಮೊದಲ ಬಾರಿಗೆ 1983ರಲ್ಲಿ ಕಾಪ್ಟರ್ ರೆಡಿ ಮಾಡಲಾಗಿತ್ತು. ವಿದೇಶಿ ಬಿಡಿ ಭಾಗಗಳ ಬಳಕೆ ಮಾಡಲಾಗಿತ್ತು. ಆ ಬಳಿಕ ಚೆನ್ನೈ, ಕೇರಳ, ಕೊಚ್ಚಿನ್ ವಿದ್ಯಾರ್ಥಿಗಳು ಕಾಪ್ಟರ್ ನಿರ್ಮಿಸಲು ಯತ್ನಿಸಿ ವಿಫಲರಾಗಿದ್ದರು. 350 ಸಿಸಿಯ ಯಮ್ಹ ಆರ್‍ಡಿ ಎಂಜಿನ್ ಇದ್ದು, 115 ಕೆಜಿ ತೂಕವಿದೆ. ಕಾಪ್ಟರ್‍ಗೆ ಜಿಸಿ-350 ಅಂತಾ ನಾಮಕರಣ ಮಾಡಲಾಗಿದೆ.

ಈ ಕಾಪ್ಟರ್ ಹಾರಲು ರನ್ ವೇ ಅವಶ್ಯಕತೆ ಇದ್ದು, ಮೈಸೂರು, ಮಟ್ಟನೂರು, ಕೇರಳ ಸೇರಿದಂತೆ ವಿವಿಧ ಕಡೆ ರನ್ ವೇ ಬಳಕೆಗೆ ಅವಕಾಶ ಕೋರಲಾಗಿದೆ. ಆದ್ರೆ ಸಕಾರಾತ್ಮಕ ಬೆಂಬಲ ಸಿಕ್ಕಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ. ದೇಶದಲ್ಲೇ ಮೊದಲ ಬಾರಿಗೆ ಝೈರೋ ಕಾಪ್ಟರ್ ಅವಿಷ್ಕಾರ ಮಾಡಿ ಯಶಸ್ಸು ಗಳಿಸರೋದು ಹೆಮ್ಮೆಯ ವಿಚಾರವಾಗಿದ್ದು, ಆದಷ್ಟು ಶೀಘ್ರದಲ್ಲಿ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಿದೆ.

Comments

Leave a Reply

Your email address will not be published. Required fields are marked *