ಪತ್ನಿಗೆ ಆ್ಯಸಿಡ್ ಕುಡಿಸಿದ್ದ ಪೊಲೀಸ್‍ ಪೇದೆಗೆ ಪ್ರಮೋಷನ್, ವಿಚಾರಣೆಯ ನೆಪದಲ್ಲಿ ಪತ್ನಿಗೆ ತಾಪತ್ರಯ

ಬಳ್ಳಾರಿ: ಪತ್ನಿಗೆ ಆ್ಯಸಿಡ್ ಕುಡಿಸಿದ ತಪ್ಪಿಗೆ ಜೈಲು ಸೇರಬೇಕಾದ ಪೊಲೀಸ್ ಪೇದೆಗೆ ಇಲಾಖೆ ರಾಜಾತಿಥ್ಯ ನೀಡಿ ಸಲುಹುತ್ತಿದೆ. ಮತ್ತೊಂದೆಡೆ ಆ್ಯಸಿಡ್ ಕುಡಿದು ಹಾಸಿಗೆಯಲ್ಲಿ ಜೀವಂತ ಶವದಂತೆ ಕಾಲ ಕಳೆಯುತ್ತಿರುವ ಪೇದೆಯ ಪತ್ನಿಗೆ ಇದೀಗ ವಿಚಾರಣೆಯ ನೆಪದಲ್ಲಿ ಪೊಲೀಸ್ ಇಲಾಖೆ ತಾಪತ್ರಯ ನೀಡುತ್ತಿದೆ. ಪೇದೆಯ ವಿರುದ್ಧ ಹೋರಾಟಕ್ಕೆ ನಿಂತ  ಪತ್ನಿ ನ್ಯಾಯಕ್ಕಾಗಿ ದೂರದ ಠಾಣೆಗಳಲ್ಲಿ ವಿಚಾರಣೆ ಎದುರಿಸುವಂತಾಗಿದೆ.

ಕೌಲಬಜಾರ್ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದ ವೆಂಕಟೇಶ್ ಆಶಾರನ್ನ 2006ರಲ್ಲಿ ಮದುವೆಯಾಗಿದ್ದ. ದಂಪತಿಗೆ ಎರಡು ಮಕ್ಕಳು ಕೂಡ ಇವೆ. ಆದ್ರೆ ವೆಂಕಟೇಶನಿಗೆ ಇದ್ದಕ್ಕಿದ್ದಂತೆ ಏನಾಯ್ತೋ ಏನೋ ಪತ್ನಿಯಿಂದ ವಿಚ್ಛೇದನ ಬಯಸಿದ್ದ. ಇದಕ್ಕೆ ವಿರೋಧಿಸಿದ ಹೆಂಡತಿಗೆ ಆ್ಯಸಿಡ್ ಕುಡಿಸಿ ಮನೆಯಿಂದ ಹೊರಹಾಕಿದ್ದ.

ಮಹಿಳೆಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಇಲಾಖೆ ವೆಂಕಟೇಶ್‍ಗೆ ಬಡ್ತಿ ನೀಡಿ ರಾಜಾತಿಥ್ಯ ನೀಡಿದೆ. ವೆಂಕಟೇಶ್ ಸದ್ಯ ತೊರಣಗಲ್‍ನಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದಾನೆ.

ಅತ್ತ ನಡೆದಾಡಲೂ ಆಗದ ಆಶಾ ಅವರಿಗೆ ದೂರದ ಕಂಪ್ಲಿ ಠಾಣೆಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿದ್ದಾರೆ. ವಿಚಾರಣೆ ಮಾಡೋಕೆ ಎಸ್‍ಪಿ ಕಚೇರಿ, ಡಿವೈಎಸ್‍ಪಿ ಕಚೇರಿಗಳು ಇದ್ದಾಗಲೂ ದೂರದ ಕಂಪ್ಲಿ ಠಾಣೆಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿರುವುದು ನಿಜಕ್ಕೂ ದುರಂತವಾಗಿದೆ.

ಪತಿ ವೆಂಕಟೇಶ್ ತನ್ನ ಸೇವಾ ಪುಸ್ತಕದಲ್ಲಿ ಪತ್ನಿಯ ಹೆಸರನ್ನೇ ನಮೂದಿಸಿಲ್ಲ. ಒಟ್ನಲ್ಲಿ ರಿಪಬ್ಲಿಕ್ ಆಫ್ ಬಳ್ಳಾರಿಯಲ್ಲಿ ಪೊಲೀಸರಿಗೊಂದು, ಜನಸಾಮಾನ್ಯರಿಗೊಂದು ನ್ಯಾಯ ಎನ್ನುಂತಾಗಿದೆ.

 

Comments

Leave a Reply

Your email address will not be published. Required fields are marked *