ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

ಬೆಂಗಳೂರು: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಎಚ್ಚರಕೆಯಿಂದ ಸಂಚರಿಸಬೇಕಾಗಿದೆ. ಯಾಕಂದ್ರೆ ಸರ್ಕಾರ ಕಟ್ಟಿರೋ ಹೈಟೆಕ್ ಅಂಡರ್ ಪಾಸ್‍ಗಳು ಮೈಮೇಲೆ ಬೀಳುವ ಸಂಭವಗಳಿವೆ.

ಹೌದು. ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿಮೆ ಮಾಡಲು ನಿರ್ಮಾಣಗೊಂಡಿರೋ ಅಂಡರ್‍ಪಾಸ್‍ಗಳು ಮೃತ್ಯುಕೂಪವಾಗಿ ಪರಿಣಮಿಸಿವೆ. ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಅನ್ನೋ ಜಾರ್ಜ್ ಸಾಹೇಬ್ರು ಸ್ವಲ್ಪ ಅಂಡರ್‍ಪಾಸ್‍ಗಳತ್ತ ಗಮನಹರಿಸಬೇಕಾಗಿದೆ. ಕಾವೇರಿ ಜಂಕ್ಷನ್ ಅಂಡರ್‍ಪಾಸ್, ಲೀ ಮೆರೆಡಿಯನ್ ಅಂಡರ್‍ಪಾಸ್, ಹೌಸಿಂಗ್ ಬೋಡ್ ಅಂಡರ್‍ಪಾಸ್, ನಾಯಂಡಹಳ್ಳಿ ಅಂಡರ್‍ಪಾಸ್ ಸೇರಿದಂತೆ ಇತರೆ ಅಂಡರ್‍ಪಾಸ್‍ಗಳು ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತಕ್ಕೆ ತಲುಪಿದೆ. ಈ ಎಲ್ಲಾ ಅಂಡರ್‍ಪಾಸ್‍ಗಳ ಗೋಡೆ ಗೋಡೆಗಳಲ್ಲೂ ನೀರು ಸೋರುತ್ತಿದ್ದು ಯಾವುದೇ ಕ್ಷಣದಲ್ಲಾದ್ರು ಕುಸಿದು ಬೀಳುವ ಆತಂಕ ಕಾಡುತ್ತಿದೆ.

ಕಾವೇರಿ ಜಂಕ್ಷನ್ ಅಂಡರ್‍ ಪಾಸ್: ಬೆಂಗಳೂರಲ್ಲಿ ಯಾವಾಗ ಮಳೆ ಬಂದ್ರೂ ಮೊದಲು ನೀರು ನಿಲ್ಲೋದು ಇದೇ ಅಂಡರ್‍ಪಾಸ್‍ನಲ್ಲಿ. ಹತ್ತಾರು ಅಲ್ಲ ನೂರಾರು ವಾಹನಗಳು ಈ ಅಂಡರ್‍ಪಾಸ್‍ನಲ್ಲಿ ಸಿಲುಕಿ ಪ್ರಾಣ ಉಳಿಸಿಕೊಳ್ಳೋಕೆ ಒದ್ದಾಡಿದ್ದಾರೆ. ಇದನ್ನ ಬರೀ 48 ಗಂಟೆಯಲ್ಲಿ ಕಟ್ಟಿ ಮೀಸೆ ತಿರುವಿದ್ದವರು ಈ ಕಡೆ ತಲೆ ಹಾಕಿಲ್ಲ. ಅಂಡರ್‍ಪಾಸ್ ಸೋರ್ತಿದ್ದು ಯಾವಾಗ ಬೀಳುತ್ತೋ ಗೊತ್ತಿಲ್ಲ. ಕಾವೇರಿ ಜಂಕ್ಷನ್ ಅಂಡರ್ ಪಾಸ್ ತಪ್ಪಿಸಿಕೊಂಡು ಸ್ಯಾಂಕಿ ಕೆರೆ ಹತ್ತಿರದಲ್ಲಿರೋ ಲೀ ಮೆರಿಡಿಯನ್ ಅಂಡರ್‍ಪಾಸ್ ಹತ್ರ ಅಪ್ಪಿತಪ್ಪಿನೂ ಹೋಗ್ಬೇಡಿ. ಈ ಅಂಡರ್‍ಪಾಸ್ ಕೂಡ ಸೋರುತ್ತಿದ್ದು ಈಗಾಗ್ಲೇ ಬಿರುಕು ಬಿಟ್ಟಿವೆ.

ಹೌಸಿಂಗ್‍ ಬೋರ್ಡ್ ಅಂಡರ್‍ ಪಾಸ್: ಇದನ್ನ ಕಟ್ಟಿ 6 ತಿಂಗಳು ಕಳೆದಿಲ್ಲ. ಅದಾಗ್ಲೇ ಗೋಡೆಗಳೆಲ್ಲಾ ಬಿರುಕುಬಿಟ್ಟಿವೆ. ನೀರು ಸೋರುತ್ತಿದ್ದು ಅಂಡರ್‍ಪಾಸ್ ಕೆಳಗೆ ನಿಲ್ತಿದೆ. ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದ ಈ ಅಂಡರ್‍ಪಾಸ್ ಈಗ ಡೆಡ್ಲಿ ಅಂಡರ್‍ಪಾಸ್ ಆಗಿದೆ.

ನಾಯಂಡಹಳ್ಳಿ ಅಂಡರ್‍ ಪಾಸ್ ಜೊತೆ ಫ್ಲೈ ಓವರ್ ಕೆಳಗೆ ಹೋದ್ರೆ ನಿಮ್ಮ ಪ್ರಾಣ ಹಾರಿಹೋಗೋದು ನಿಶ್ಚಿತ. ಇಷ್ಟೆಲ್ಲಾ ತೂತುಗಳಿದ್ರೂ ಬಿಬಿಎಂಪಿಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ಅಂಡರ್ ಪಾಸ್ ಬಿದ್ದು ಅದರೊಳಗೆ ಸಿಲುಕಿ ಮೃತಪಟ್ಟರೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ತಾರೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಂದ ಇರಬೇಕಾಗಿದೆ.

ಈಗಾಗಲೇ ರಾಜಾಕಾಲುವೆಯ ಕಳಪೆ ಕಾಮಗಾರಿಯಿಂದ 5 ಜನರ ಬಲಿಯಾಗಿದೆ. ಈ ಅಂಡರ್‍ಪಾಸ್‍ಗಳಿಂದಾಗಿ ಇನ್ನಷ್ಟು ಬಲಿಯಾಗೋ ಪ್ರಸಂಗ ಬಂದಿದೆ. ವಿವಿಐಪಿಗಳು ಓಡಾಡೋ ಅಂಡರ್‍ಪಾಸ್‍ಗಳ ಕಥೆಯೇ ಹೀಗಾದ್ರೆ ಇನ್ನು ಜನಸಮಾನ್ಯರು ಓಡಾಡೋ ಅಂಡರ್‍ ಪಾಸ್‍ಗಳ ಸ್ಥಿತಿ ಏನು ಎಂಬುದು ಜನರ ಪ್ರಶ್ನೆ.

Comments

Leave a Reply

Your email address will not be published. Required fields are marked *