ಡಿಸೆಂಬರ್ ನಲ್ಲಿ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆ ಜಾರಿ

ಬೆಂಗಳೂರು: ಇಂದಿರಾ ಕ್ಯಾಂಟೀನ್ ಆರಂಭಿಸಿದ ಬಳಿಕ ರಾಜ್ಯಸರ್ಕಾರ ಇದೀಗ ಡಿಸೆಂಬರ್ ತಿಂಗಳಿನಿಂದ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅನಿಲ ಭಾಗ್ಯ ಯೋಜನೆ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಪ್ರಯೋಜನ ಪಡೆದವರನ್ನು ಹೊರತುಪಡಿಸಿ ಉಳಿದ ಎಲ್ಲಾ ಬಿಪಿಎಲ್ ಕಾರ್ಡುದಾರರು ಅನಿಲ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುಹುದಾಗಿದೆ

ಈ ಯೋಜನೆಯಿಂದ ಸ್ಟೌವ್, ಕನೆಕ್ಟರ್ ಹಾಗೂ ಮೊದಲ ಎರಡು ಗ್ಯಾಸ್ ಸಿಲಿಂಡರ್ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ. ಇದಕ್ಕೆ ಸರ್ಕಾರಕ್ಕೆ ಪ್ರತಿ ಸಂಪರ್ಕಕ್ಕೆ 4,040 ರೂ. ವೆಚ್ಚ ತಗಲಲಿದೆ ಎಂಬುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ 300 ಕೋಟಿ ರೂ. ವ್ಯಯಿಸಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ  ಅವರು ಈ ಹಿಂದೆ ತಿಳಿಸಿದ್ದರು.

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ (ಎಲ್‍ಪಿಜಿ) ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಲಿರುವ ಯೋಜನೆಗೆ `ಮುಖ್ಯಮಂತ್ರಿ ಅನಿಲ ಭಾಗ್ಯ’ ಎಂದು ಹೆಸರಿಡಲಾಗಿದೆ. ಕೇಂದ್ರ ಸರ್ಕಾರದ `ಉಜ್ವಲ’ ಯೋಜನೆಯಡಿ ಅನಿಲ ಸಂಪರ್ಕ ದೊರೆಯದ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

ಉಜ್ವಲದಲ್ಲಿ ಕೇವಲ ಅನಿಲ ಸಂಪರ್ಕ ಮಾತ್ರ ನೀಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ಯೋಜನೆಯಲ್ಲಿ ಸ್ಟೌ ಕೂಡಾ ವಿತರಣೆಯಾಗಲಿದೆ. ಆದರೆ ಯಾವುದಾದರೂ ಒಂದು ಯೋಜನೆಯಡಿ ಮಾತ್ರ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಉಜ್ವಲದಲ್ಲಿ ಸಂಪರ್ಕ ಪಡೆಯಲು ಇಚ್ಚಿಸದವರು ರಾಜ್ಯ ಸರ್ಕಾರದ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಈ ಹಿಂದೆ ಆಹಾರ ಸಚಿವ ಯುಟಿ ಖಾದರ್ ತಿಳಿಸಿದ್ದರು.

Comments

Leave a Reply

Your email address will not be published. Required fields are marked *