ಹೈಕಮಾಂಡ್‍ಗೆ ಕಪ್ಪ ವಿವಾದ – ಬಿಎಸ್‍ವೈ, ಅನಂತ್ ವಿರುದ್ಧ ಚಾರ್ಜ್‍ಶೀಟ್ ಸಾಧ್ಯತೆ

ಬೆಂಗಳೂರು: ಹೈಕಮಾಂಡ್‍ಗೆ ಕಪ್ಪ ಸಲ್ಲಿಸಿರುವ ಪ್ರಕರಣಕ್ಕೆ ಸ್ಫೋಟಕ ತಿರುವು ದೊರೆತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಚ್.ಎನ್.ಅನಂತಕುಮಾರ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಮತ್ತು ಆಡಿಯೋ ಸಂಭಾಷಣೆ ಅಸಲಿ ಎಂದು    ಧೃಡಪಟ್ಟಿದೆ.

ಸಮಾರಂಭವೊಂದರ ವೇದಿಕೆಯಲ್ಲಿ ಸಚಿವ ಅನಂತ್ ಕುಮಾರ್ ಹಾಗೂ ಬಿಎಸ್‍ವೈ ಹೈಕಮಾಂಡ್‍ಗೆ ಕಪ್ಪ ಕೊಟ್ಟಿರುವ ಕುರಿತು ಪರಸ್ಪರ ಚರ್ಚೆ ನಡೆಸಿದ್ದ ದೃಶ್ಯಾವಳಿಗಳನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿತ್ತು. ಈ ಸಂಬಂಧ ಕೆಪಿಸಿಸಿ ಕಾನೂನು ವಿಭಾಗದ ಅಧ್ಯಕ್ಷ ಸಿ.ಎಂ. ಧನಂಜಯ್ ಫೆಬ್ರುವರಿ 15ರಂದು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು. ಕೋರ್ಟ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸೂಚನೆ ನೀಡಿತ್ತು. ಇದರ ಅನ್ವಯ ಇಬ್ಬರೂ ಬಿಜೆಪಿ ನಾಯಕರ ವಿರುದ್ಧ ಸೈಬರ್ ಕ್ರೈಂ ವಿಭಾಗದ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಬಿಜೆಪಿಯ ಇಬ್ಬರು ನಾಯಕರು ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳ ಮುಂದೆ ಹಾಜರಾಗಿ ಧ್ವನಿ ಮಾದರಿಗಳನ್ನು ಪರೀಕ್ಷೆಗೆ ನೀಡಲು ನಿರಾಕರಿಸಿದ್ದರು. ಇದರಿಂದ ಕಾಂಗ್ರೆಸ್ ಮತ್ತೆ ಧ್ವನಿ ಮಾದರಿ ನೀಡುವಂತೆ ನಿರ್ದೇಶಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿತ್ತು. ಆನಂತರ ಧ್ವನಿ ಮಾದರಿ ನೀಡುವಂತೆ ನ್ಯಾಯಾಲಯ ನಿರ್ದೇಶನ ನೀಡಿತ್ತು.

ಕೋರ್ಟ್ ಸೂಚನೆ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಆಕ್ಟೋಬರ್ 4ರಂದು ಆಡಿಯೋದಲ್ಲಿದ್ದ ಬಿಎಸ್ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಅವರದ್ದೇನಾ ಅಂತ ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ಕ್ಕೆ ಸ್ಯಾಂಪಲ್ ಕಳಿಸಿಕೊಟ್ಟಿತ್ತು. ಸೈಬರ್ ಕ್ರೈಂ ಪೊಲೀಸರಿಗೆ ತಲುಪಿರುವ ಎಫ್‍ಎಸ್‍ಎಲ್‍ನ ವರದಿಯ ಪ್ರಕಾರ ಸಿಡಿಯಲ್ಲಿನ ಧ್ವನಿ ಬಿಎಸ್‍ವೈ ಮತ್ತು ಅನಂತ್ ಕುಮಾರ್ ಅವರದ್ದೇ ಎಂಬುದು ಸಾಬೀತಾಗಿದೆ. ಹೀಗಾಗಿ ಸೋಮವಾರ ಬಿಎಸ್‍ವೈ, ಅನಂತಕುಮಾರ್ ವಿರುದ್ದ ಐಪಿಸಿ ಸೆಕ್ಷನ್ 124(ಂ) ಅನ್ವಯ ಎಫ್‍ಐಆರ್ ದಾಖಲಾಗುವ ಸಾಧ್ಯತೆ ಇದೆ.

ಎಸಿಬಿಯು ಎಫ್‍ಐಆರ್ ದಾಖಲಿಸಿದರೆ, ಸಚಿವ ಅನಂತಕುಮಾರ್ ಮತ್ತು ಯಡಿಯೂರಪ್ಪ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ ಸಮಯದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಡೈರಿಯ ಆಯ್ದ ಭಾಗಗಳನ್ನು 2017ರ ಫೆಬ್ರುವರಿಯಲ್ಲಿ ಬಿಜೆಪಿ ನಾಯಕರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಇದರಲ್ಲಿ ರಾಜ್ಯ ಕಾಂಗ್ರೆಸ್, ಹೈಕಮಾಂಡ್‍ನ ಪ್ರಮುಖ ನಾಯಕರಿಗೆ ಕಪ್ಪ ಕಾಣಿಕೆ ನೀಡಿರುವ ವಿವರಗಳಿವೆ ಎಂದೂ ಅವರು ಆರೋಪಿಸಿದ್ದರು.

 

https://www.youtube.com/watch?v=t_IzZbNc9OM

Comments

Leave a Reply

Your email address will not be published. Required fields are marked *