ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

ವಾಷಿಂಗ್ಟನ್: ಸಿನಿಮಾಗಾಗಿ ದರೋಡೆಕೋರನಂತೆ ನಟಿಸುತ್ತಿದ್ದ ನಟನನ್ನು ನಿಜವಾದ ದರೋಡೆಕೋರ ಎಂದು ತಿಳಿದು ಪೊಲೀಸರು ಅವರ ಮೇಲೆ ಫೈರಿಂಗ್ ಮಾಡಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.

ಇಂಡಿಯಾನಾದ ಕ್ರಾವ್‍ಫರ್ಡ್ಸ್ ವಿಲ್ಲೆ ಪೊಲೀಸರು ಬಾಡಿಕ್ಯಾಮ್ ವಿಡಿಯೋವನ್ನ ಬಿಡುಗಡೆ ಮಾಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ನಟನ ಮೇಲೆ ಗುಂಡು ಹಾರಿಸೋ ದೃಶ್ಯ ಸೆರೆಯಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮುಸುಕುಧಾರಿ ವ್ಯಕ್ತಿ ಗನ್ ಹಿಡಿದು ಉಪಹಾರ ಗೃಹದೊಳಗೆ ಹೋಗುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ರು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಪೊಲೀಸರು ಸ್ಥಳಕ್ಕೆ ಬಂದ ವೇಳೆ ಶೂಟಿಂಗನ್ನು ನಿಜವಾದ ದರೋಡೆ ಎಂದು ತಿಳಿದು ಗನ್ ಕಳೆಗಿಡುವಂತೆ ಹೇಳಿದ್ದಾರೆ. ಬಳಿಕ ಅದೊಂದು ಶೂಟಿಂಗ್ ಪ್ರಾಪರ್ಟಿ ಅಷ್ಟೇ ಎಂಬುದು ಗೊತ್ತಾಗಿದೆ.

ಡ್ರಾಪ್ ದಿ ಗನ್ ಎಂದು ಹೇಳುತ್ತಾ ಪೊಲೀಸ್ ಅಧಿಕಾರಿ ಫೈರ್ ಮಾಡೋದನ್ನ ವಿಡಿಯೋದಲ್ಲಿ ಕಾಣಬಹುದು. ಆಗ ನಟ ಜೆಫ್ ಡಫ್ ನಾವು ಸಿನಿಮಾ ಶೂಟಿಂಗ್ ಮಾಡ್ತಿದ್ದೀವಿ ಎಂದು ಕಿರುಚುತ್ತಾ ಗನ್ ಕೆಳಗಿಟ್ಟು ಮುಸುಕು ತೆಗೆದಿದ್ದಾರೆ. ಅದೃಷ್ಟವಶಾತ್ ಪೊಲೀಸರು ಹಾರಿಸಿದ ಗುಂಡು ಡಫ್‍ಗೆ ತಗುಲಲಿಲ್ಲ. ಬದಲಿಗೆ ಹತ್ತಿರದ ಕಟ್ಟಡಕ್ಕೆ ಬಿದ್ದಿದೆ. ಪೊಲೀಸ್ ಇಲಾಖೆ ಈ ವಿಡಿಯೋವನ್ನ ತನ್ನ ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಮತ್ತೊಬ್ಬ ನಟ ಫಿಲಿಪ್ ಡೆಮೊರೆಟ್, ಬುಲೆಟ್ ಆತನ ತಲೆಯ ಪಕ್ಕದಲ್ಲೇ ಹೋಯ್ತು. ಅದರ ಬಗ್ಗೆ ನಾನು ಯೋಚಿಸಲಾರೆ. ಒಂದು ವೇಳೆ ಗುಂಡು ತಾಗಿದ್ದರೆ ದೊಡ್ಡ ಅನಾಹುತವಾಗ್ತಿತ್ತು. ದೇವರ ದಯದಿಂದ ಹಾಗಾಗಲಿಲ್ಲ ಎಂದಿದ್ದಾರೆ.

ಮಾಂಟ್ಗೊಮೆರಿ ಕೌಂಟಿ ಪ್ರೊಡಕ್ಷನ್‍ನವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದರೆಂದು ಬಳಿಕ ಇಂಡಿಯಾನಾ ಪೊಲೀಸರಿಗೆ ಗೊತ್ತಾಗಿದೆ. ಆದ್ರೆ ಉಪಹಾರ ಗೃಹದವರಾಗಲಿ, ಪ್ರೊಡಕ್ಷನ್ ಕಂಪನಿಯವರಗಲೀ ಪೊಲೀಸರಿಗೆ ಹಾಗೂ ಅಕ್ಕಪಕ್ಕದವರಿಗೆ ಶೂಟಿಂಗ್ ನಡೆಯುವ ಬಗ್ಗೆ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *