ಕಾರವಾರ: ಗಾಂಧಿ ಜಯಂತಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಚಿವರ ಎದುರೇ ಜಿಲ್ಲಾಡಳಿತ ಎಡವಟ್ಟು ಮಾಡಿದ ಘಟನೆ ಕಾರವಾರದಲ್ಲಿ ನೆಡೆದಿದೆ.
ಸ್ವಚ್ಛತಾ ಕಾರ್ಯದಲ್ಲಿ ಕಳೆ ಎಂದು ಕಡಲ ಕೊರೆತ ತಡೆಗಟ್ಟಲು ಬೆಳೆಸಿದ್ದ ಬಂಗುಡೆ ಬಳ್ಳಿ (ಸ್ಯಾಂಡ್ ಬೈಂಡರ್) ಯನ್ನು ಲೋಡ್ ಗಟ್ಟಲೇ ಕಿತ್ತು ಹಾಕಲಾಗಿದೆ. ಇದು ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರ (ಸಿ.ಆರ್.ಜಡ್) ನಿಯಮ ಉಲ್ಲಂಘನೆಯಾಗಿದೆ.

ಇಂದು ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾಡಳಿತ ಆರ್.ವಿ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಮಾಜಾಳಿ ಕಡಲ ತೀರದಲ್ಲಿ ಸ್ವಚ್ಛತೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕರಾವಳಿ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರೂ ಹಾಗೂ ಜಿಲ್ಲಾಧಿಕಾರಿಗಳಾದ ಎಸ್.ಎಸ್ ನಕುಲ್ ಹಾಗು ಸಚಿವ ಆರ್.ವಿ ದೇಶಪಾಂಡೆ ಸೇರಿದಂತೆ ಇಲಾಖೆಯ ಎಲ್ಲಾ ಅಧಿಕಾರಿಗಳು, ಶಾಲಾ ಕಾಲೇಜಿನ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಆದರೆ ಸ್ವಚ್ಛತೆಯ ನೆಪದಲ್ಲಿ ಸಿ.ಆರ್.ಜಡ್‍ನ ನೂರು ಮೀಟರ್ ಒಳಗೆ ಬರುವ ಕಡಲ ಕೊರೆತವನ್ನು ನಿಯಂತ್ರಿಸಲು ಬೆಳೆಸಿ ಸಂರಕ್ಷಿಸಿದ್ದ ಸ್ಯಾಂಡ್ ಬೈಂಡರ್ ಎಂದೇ ಪ್ರಸಿದ್ಧವಾಗಿರುವ ಬಂಗುಡೆ ಬಳ್ಳಿಯನ್ನು ಕಿತ್ತುಹಾಕಲಾಗಿದೆ. ಅಸಲಿಗೆ ವಿದ್ಯಾರ್ಥಿಗಳಿಗಾಗಲಿ ಅಥವಾ ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಅಧಿಕಾರಿ ವರ್ಗಗಳಿಗಾಗಲಿ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಆದರೇ ಈ ಕಡಲ ಕೊರೆತದ ಬಳ್ಳಿಯ ಬಗ್ಗೆ ತಿಳಿಸಿ ಹೇಳಬೇಕಿದ್ದ ಜಿಲ್ಲಾ ಕರಾವಳಿ ವಲಯ ನಿಯಂತ್ರಣ ಪ್ರಾಧಿಕಾರ ನಿರ್ಲಕ್ಷಿಸಿದ್ದರು.

ಏನಿದು ಬಂಗುಡೆ ಬಳ್ಳಿ:
ವೈಜ್ಞಾನಿಕವಾಗಿ ಬಂಗುಡೆ ಬಳ್ಳಿಯನ್ನ ಐಪೋಮೇಯಾ ಎಂದು ಕರೆಯುತ್ತಾರೆ. ಇದು ಕಡಲ ಕೊರೆತ ನಿಯಂತ್ರಿಸಲು ಸಮುದ್ರ ಕಡಲ ತೀರದಲ್ಲಿ ಬೆಳಸಲಾಗುತ್ತದೆ. ಹೆಚ್ಚು ಕಡಲಕೊರೆತ ಇರುವ ಸ್ಥಳಗಳಲ್ಲಿ ಸಂರಕ್ಷಿಸಿ ಬೆಳೆಸಲಾಗುತ್ತದೆ. ಇನ್ನು ಈ ಬಳ್ಳಿಯನ್ನ ಕಿತ್ತು ಹಾಕುವುದು ಸಿ.ಆರ್.ಜೆಡ್‍ನ ನಿಯಮ ಪ್ರಕಾರ ಉಲ್ಲಂಘನೆ.









Leave a Reply