ನೃತ್ಯ ವೀಕ್ಷಿಸಿದ್ದಕ್ಕೆ ದಲಿತ ಯುವಕನ ಹತ್ಯೆ

ಅಹಮದಾಬಾದ್: ಗರ್ಬಾ ನೃತ್ಯ ವೀಕ್ಷಿಸಿದ್ದಕ್ಕೆ 21 ವರ್ಷದ ದಲಿತ ಯುವಕನನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಇಲ್ಲಿನ ಆನಂದ್ ಜಿಲ್ಲೆಯಲ್ಲಿ ಶನಿವಾರದಂದು ನವರಾತ್ರಿ ಅಂಗವಾಗಿ ಪಟೇಲ್ ಸಮುದಾಯದವರು ಗರ್ಬಾ ನೃತ್ಯ ಆಯೋಜಿಸಿದ್ದರು. ಈ ವೇಳೆ ಭದ್ರಾನಿಯಾ ಗ್ರಾಮದ ನಿವಾಸಿಯಾದ ಜಯೇಶ್ ಸೋಲಂಕಿ ತನ್ನ ಇತರೆ ನಾಲ್ವರು ದಲಿತ ಸ್ನೇಹಿತರೊಂದಿಗೆ ನೃತ್ಯ ವೀಕ್ಷಿಸುತ್ತಿದ್ದರು. ಇದ್ದಕ್ಕಿದ್ದಂತೆ ಪಟೇಲ್ ಸಮುದಾಯದ ಸದಸ್ಯರೊಬ್ಬರು ಬಂದು ಅವರ ಜಾತಿಯ ಬಗ್ಗೆ ನಿಂದಿಸಲು ಶುರು ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ದಲಿತರಿಗೆ ಗರ್ಬಾ ನೃತ್ಯ ವೀಕ್ಷಿಸಲು ಯಾವುದೇ ಹಕ್ಕಿಲ್ಲ ಎಂದು ಹೇಳಿದ ಆರೋಪಿಗಳು, ತನ್ನ ಕಡೆಯವರಾದ ಕೆಲವು ವ್ಯಕ್ತಿಗಳನ್ನು ಸ್ಥಳಕ್ಕೆ ಬರುವಂತೆ ಹೇಳಿದ್ದರು. ನಂತರ ಪಟೇಲ್ ಸಮುದಾಯದವರು ದಲಿತರಿಗೆ ಥಳಿಸಿದ್ದು, ಸೋಲಂಕಿಯ ತಲೆಯನ್ನು ಗೋಡೆಗೆ ಗುದ್ದಿದ್ದಾರೆ ಎಂದು ಭದ್ರಾನ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೂಡಲೇ ಸೋಲಂಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯ್ತು. ಆದ್ರೆ ಮರುದಿನ ಬೆಳಿಗ್ಗೆ ಅವರು ಸಾವನ್ನಪಿರುವುದಾಗಿ ವೈದ್ಯರು ಹೇಳಿದ್ದಾರೆ.

ಈ ಬಗ್ಗೆ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕೊಲೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‍ನಡಿ 8 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಈಗಾಗಲೇ ಎಂಟು ಆರೋಪಿಗಳನ್ನ ಬಂಧಿಸಲಾಗಿದೆ.

ಇದೊಂದು ಪೂರ್ವನಿಯೋಜಿತ ಕೃತ್ಯವಾ ಎಂಬುದನ್ನ ತಳ್ಳಿಹಾಕಿರೋ ಉಪ ಪೊಲೀಸ್ ವರಿಷ್ಠಾಧಿಕಾರಿ ಎಎಮ್ ಪಟೇಲ್, ಆರೋಪಿಗಳಿಗೂ ಜಯೇಶ್‍ಗೂ ಯಾವುದೇ ದ್ವೇಷವಿರಲಿಲ್ಲ. ಆ ಕ್ಷಣದಲ್ಲಿ ಜಗಳ ತಾರಕಕ್ಕೇರಿ ಈ ಕೃತ್ಯ ನಡೆದಿದೆ. ನಾವು ಎಲ್ಲಾ ದೃಷ್ಟಿಯಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *