ತೆಹ್ರಾನ್: 7 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಇರಾನ್ ನಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಗಿದೆ.
ಪಾರ್ಸಾಬಾದ್ ನಗರದಲ್ಲಿ ಬುಧವಾರ ಪ್ರಕರಣ ಅಪರಾಧಿಯಾಗಿದ್ದ ಇಸ್ಮಾಯಿಲ್ ಜಾಫರ್ಜದಹ್ (42) ನನ್ನು ಗಲ್ಲಿಗೇರಿಸಲಾಗಿದ್ದು, ಈ ಸಂದರ್ಭದಲ್ಲಿ ಜನರು ಚಪ್ಪಾಳೆ ತಟ್ಟುವ ಮೂಲಕ ದೃಶ್ಯವನ್ನು ಸಂಭ್ರಮಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
7 ವರ್ಷದ ಅಂಟೆನಾ ಎಂಬಾಕೆ ಜೂನ್ 19 ರಂದು ವಾಕಿಂಗ್‍ಗೆ ತೆರಳಿದ್ದ ವೇಳೆ ಕಾಣೆಯಾಗಿದ್ದಳು. ಅಂಟೆನಾ ಮೃತದೇಹ ಇಸ್ಮಾಯಿಲ್ ಮನೆಯ ಗ್ಯಾರೇಜ್‍ನಲ್ಲಿ ದೊರೆತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ಶಂಕೆಯ ಆಧಾರದಲ್ಲಿ ಇಸ್ಮಾಯಿಲ್ ನನ್ನು ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ಆಗಸ್ಟ್ ನಲ್ಲಿ ನಡೆದು ಸೆಪ್ಟೆಂಬರ್ 11 ರಂದು ಸುಪ್ರೀಂ ಕೋರ್ಟ್ ಆತನಿಗೆ ಗಲ್ಲುಶಿಕ್ಷೆ ವಿಧಿಸಿತ್ತು.
ಪ್ರಕರಣದ ವಿಚಾರಣೆ ವೇಳೆ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಅಷ್ಟೇ ಅಲ್ಲದೇ 2 ವರ್ಷದ ಹಿಂದೆ ಮಹಿಳೆಯೊಬ್ಬರನ್ನು ಅತ್ಯಾಚಾರಗೈದು ಕೊಲೆ ಮಾಡಿರುವುದನ್ನೂ ಒಪ್ಪಿಕೊಂಡಿದ್ದ.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಅತ್ಯಂತ ಭಯಾನಕವಾಗಿದ್ದು, ಈ ಪ್ರಕರಣದಲ್ಲಿ ತ್ವರಿತ ನ್ಯಾಯಾಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಇರಾಕ್ ಅಧ್ಯಕ್ಷ ಹಸ್ಸಾನ್ ರೌಹಾನಿ ತಿಳಿಸಿದ್ದಾರೆ.
ಇರಾನ್ ಆಡಳಿತವು ನೇಣಿಗೆ ಏರಿಸಿದ ಬಗ್ಗೆ ಯಾವುದೇ ಅಧಿಕೃತ ಫೋಟೋವನ್ನು ಬಹಿರಂಗಪಡಿಸಿಲ್ಲ. ಆದರೆ ಸರ್ಕಾರೇತರ ಸಂಸ್ಥೆ ಅಮ್ನೆಸ್ಟಿ ಇಂಟರ್‍ನ್ಯಾಷನಲ್ ಪ್ರಕರಣವನ್ನು 2016ರ ನಂತರ ಜಾರಿಗೆ ಮಾಡಲಾಗಿರುವ ಐದು ಮರಣದಂಡನೆಗಳ ಸಾಲಿಗೆ ಸೇರಿಸಿದೆ.

Leave a Reply