ತೊಡೆಯ ಮೇಲೆ ಮಲಗಿಸಿಕೊಂಡು ನೈಲಾನ್ ವೈರ್‍ನಿಂದ ಬುದ್ಧಿಮಾಂದ್ಯ ಮಗಳ ಕತ್ತು ಬಿಗಿದು ಕೊಂದ ತಂದೆ

ಚೆನ್ನೈ: ಆಟೋ ಡ್ರೈವರ್‍ವೊಬ್ಬ ವೈರ್‍ನಿಂದ ತನ್ನ 27 ವರ್ಷದ ಬುದ್ಧಿಮಾಂದ್ಯ ಮಗಳ ಕತ್ತು ಬಿಗಿದು ಕೊಲೆ ಮಾಡಿರೋ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

ಮಗಳನ್ನು ಕೊಲೆ ಮಾಡಿದ ಕೆಲವೇ ನಿಮಿಷಗಳಲ್ಲಿ ತಂದೆ ಪೊಲೀಸರಿಗೆ ಶರಣಾಗಿದ್ದಾನೆ. ಇಲ್ಲಿನ ನೆರ್ಕುಂದ್ರಮ್ ಪ್ರದೇಶದ ನಿವಾಸಿ ಆದಿಕೇಶವನ್ ಮಗಳನ್ನ ಕೊಲೆ ಮಾಡಿದ ಆರೋಪಿ. ಈತನ ಪತ್ನಿ ಮೋಹನಾ 10 ವರ್ಷಗಳ ಹಿಂದೆಯೇ ಕೌಟುಂಬಿಕ ಕಲಹದ ಕಾರಣ ಬೇರ್ಪಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು 18 ವರ್ಷದ ಮಗ ತಂದೆಯೊಂದಿಗೆ ಹಾಗು ಮಗಳು ತಾಯಿಯೊಂದಿಗೆ ವಾಸವಿದ್ದರು.

ಆದಿಕೇಶವನ್‍ನ ಮಗಳಾದ ಕೌಸಲ್ಯ ತಿಂಗಳಿಗೊಮ್ಮೆ ಅಪ್ಪ ಮತ್ತು ಅಣ್ಣನನ್ನು ಭೇಟಿಯಾಗಲು ಬರುತ್ತಿದ್ದಳು. ಆ ಸಂದರ್ಭದಲ್ಲೆಲ್ಲಾ ಆದಿಕೇಶವನ್ ತನ್ನ ಮಗಳು ಗುಣಮುಖವಾಗಬಹುದು ಎಂಬ ಆಸೆಯಿಂದ ಹಲವಾರು ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ದ.

ಸೆಪ್ಟೆಂಬರ್ 13ರಂದು ಆದಿಕೇಶವನ್‍ನ ಪತ್ನಿ ಇದ್ದಕ್ಕಿದ್ದಂತೆ ಮನೆಗೆ ಬಂದು ಕೌಸಳ್ಯಳನ್ನು ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದರು. ಆದಿಕೇಶವನ್ ಮನೆಯಲ್ಲಿ ಕೌಸಲ್ಯ ಆಗಾಗ ತುಂಬಾ ಕೋಪದಿಂದ ವರ್ತಿಸುತ್ತಿದ್ದಳು. ಬುಧವಾರ ಬೆಳಿಗ್ಗೆ ಸುಮಾರು 11.30ರ ಸಮಯದಲ್ಲಿ ಕೌಸಲ್ಯಗೆ ಅಪಸ್ಮಾರ ಅಟ್ಯಾಕ್ ಆಗಿ ಆಕೆಯ ಸ್ಥಿತಿ ಗಂಭೀರವಾಗಿತ್ತು. ಇದರಿಂದ ಬೇಸತ್ತ ಆದಿಕೇಶವನ್ ಮಗಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ನೈಲಾನ್ ವೈರ್‍ನಿಂದ ಆಕೆಯ ಕತ್ತು ಬಿಗಿದು ಸಾಯಿಸಿದ್ದಾನೆ.

ಮಗಳನ್ನು ಕೊಂದ ನಂತರ ಆದಿಕೇಶವನ್ ಕೊಯಂಬೇಡು ಪೊಲೀಸ್ ಠಾಣೆಗೆ ಹೋಗಿ ನಡೆದಿದ್ದೆಲ್ಲವನ್ನೂ ವಿವರಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಕೂಡಲೇ ಇನ್ ಸ್ಪೆಕ್ಟರ್ ರಾಜೇಂದ್ರನ್ ಆದಿಕೇಶವನ್ ಮನೆಗೆ ಹೋಗಿದ್ದು, ಕೌಸಲ್ಯ ಸಾವನ್ನಪ್ಪಿರುವುದನ್ನು ಖಚಿತವಾಗಿದೆ. ನಂತರ ಆದಿಕೇಶವನ್‍ನನ್ನು ಬಂಧಿಸಲಾಗಿದ್ದು, ಕೌಸಲ್ಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯಿಂದ ಆದಿಕೇಶವನ್ ಮನೆಯ ಅಕ್ಕಪಕ್ಕದವರು ಸೇರಿದಂತೆ ಪೊಲೀಸರು ಕೂಡ ಶಾಕ್ ಆಗಿದ್ದಾರೆ.

Comments

Leave a Reply

Your email address will not be published. Required fields are marked *