ಬಳ್ಳಾರಿ ಟು ಹೈದರಾಬಾದ್ ವಿಮಾನಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಜಯಂತ್ ಸಿನ್ಹಾ

ಬಳ್ಳಾರಿ: ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್‍ಗೆ ಉಡಾನ್ ಯೋಜನೆಯಡಿ ಇಂದಿನಿಂದ ವಿಮಾನಯಾನ ಆರಂಭವಾಗಿದ್ದು ಕೇಂದ್ರ ಸಚಿವ ಜಯಂತ್ ಸಿನ್ಹಾ ಚಾಲನೆ ನೀಡಿದರು.

ಬಹುದಿನದ ನಿರೀಕ್ಷೆಯಂತೆ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ಟ್ರೂಜೆಟ್ ಸಂಸ್ಥೆ ವಿಮಾನದ ಹಾರಾಟದ ವ್ಯವಸ್ಥೆ ಮಾಡಿದೆ.

70 ಆಸನಗಳ ಈ ವಿಮಾನವು ಜಿಂದಾಲ್ ವಿಮಾನ ನಿಲ್ದಾಣದಿಂದ ಪ್ರತಿನಿತ್ಯ ಬೆಳಗ್ಗೆ 6.20 ಕ್ಕೆ ಹೈದ್ರಾಬಾದ್‍ನಿಂದ ಹೊರಟು ಬೆ. 7.25 ಕ್ಕೆ ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತಲುಪಲಿದೆ. ಪುನಃ ಇಲ್ಲಿಂದ ಬೆ. 7.55 ಕ್ಕೆ ಹೊರಟು ಬೆ. 9 ಗಂಟೆಗೆ ಹೈದರಾಬಾದ್ ತಲುಪಲಿದೆ.

ಇದರ ಪ್ರಯಾಣ ದರ ರೂ.999 ರಿಂದ ರೂ.2500 ರೂಪಾಯಿವರೆಗೆ ಇದೆ. ಮೊದಲ ದಿನವಾದ ಇಂದು ಹೈದ್ರಾಬಾದ್‍ನಿಂದ 20 ಪ್ರಯಾಣಿಕರು ಬಳ್ಳಾರಿಗೆ ಆಗಮಿಸಿದರೆ, ಬಳ್ಳಾರಿಯಿಂದ 41 ಪ್ರಯಾಣಿಕರು ಹೈದರಾಬಾದ್ ಗೆ ಪ್ರಯಾಣ ಬೆಳಸಿದರು.

ಈ ವೇಳೆ ಮಾತನಾಡಿದ ಸಚಿವ ಸಿನ್ಹಾ, ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೈದರಾಬಾದ್ ನಡುವೆ ಇಂದಿನಿಂದ ಒಂದು ವಿಮಾನ ನಿರಂತರ ಹಾರಾಟ ಮಾಡಲಿದೆ. ಮುಂದಿನ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ಹಾಗೂ ಮುಂಬೈಗೆ ಇಲ್ಲಿಂದ ವಿಮಾನಗಳ ಹಾರಾಟ ವ್ಯವಸ್ಥೆ ಮಾಡಲಾಗುವುದು. ಮೊಟ್ಟ ಮೊದಲು ಮೈಸೂರಿನಲ್ಲಿ ಆರಂಭವಾದ ಈ ಸೌಲಭ್ಯ ಇಂದು ಬಳ್ಳಾರಿಯಲ್ಲೂ ಆರಂಭಿಸಲಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲೂ ವಿಮಾನ ಹಾರಾಟ ಯೋಜನೆಗಳನ್ನು ಆರಂಭ ಮಾಡಲು ಚಿಂತನೆ ನಡೆಸಲಾಗಿದೆ. `ಹವಾಯ್ ಚಪ್ಪಲ್ ಸೆ ಹವಾಯ್ ಜಹಾಜ್’ ಎಂದರೆ ಶ್ರೀಸಾಮಾನ್ಯ ಕೂಡ ವಿಮಾನ ಪ್ರಯಾಣ ಮಾಡಬೇಕೆಂಬುದು ಪ್ರಧಾನಿ ಮೋದಿಯವರ ಕನಸಾಗಿದೆ. ಈ ಕನಸು ಈಗ ನನಸಾಗುತ್ತಿದೆ. ವಿಮಾನ ದರಗಳು ಮತ್ತು ಸೇವೆ ಸುಲಭವಾಗಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದ ಪ್ರಸ್ತಾಪಿತ ಎಲ್ಲ ಯೋಜನೆಗಳು ಶೀಘ್ರ ಪೂರ್ಣಗೊಳ್ಳಲಿವೆ ಎಂದರು.

ಸಂಸದರಾದ ಶ್ರೀರಾಮುಲು, ಕರಡಿ ಸಂಗಣ್ಣ, ಸಚಿವ ಸಂತೋಷ್ ಲಾಡ್, ಶಾಸಕ ಆನಂದ್ ಸಿಂಗ್, ಎಂಎಲ್‍ಸಿ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತು ಉದ್ಯಮಿ ಸಜ್ಜನ್ ಜಿಂದಾಲ್, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಉದ್ಘಾಟನ ಕಾರ್ಯಕ್ರಮದಲ್ಲಿ ಉಪಸ್ಥಿತಿರಿದ್ದರು.

Comments

Leave a Reply

Your email address will not be published. Required fields are marked *