ಡಾಕ್ಟರ್ ಆಗ್ಬೇಕೆಂಬ ಕನಸು- ಸರ್ಕಾರಿ ಕೋಟಾದಲ್ಲಿ ಸೀಟ್ ಸಿಕ್ಕರೂ ಫೀಸ್ ಕಟ್ಟಲು ಹಣವಿಲ್ಲ

ಬಳ್ಳಾರಿ: ಡಾಕ್ಟರ್ ಆಗಬೇಕೆನ್ನುವ ಕನಸು ಇಟ್ಟುಕೊಂಡಿರುವ ತಾಲೂಕಿನ ಹಲಕುಂದಿ ಗ್ರಾಮದ ಪೂಜಾ ಎಂಬ ಹುಡುಗಿ ಸಹಾಯವನ್ನು ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಪೂಜಾ ಹಲಕುಂದಿ ಗ್ರಾಮದ ನಿವಾಸಿ ಹೇಮಂತರಾಜು ಎಂಬ ರೈತನ ಮಗಳು. ಇವರಿಗೆ ಕೇವಲ ಒಂದುವರೆ ಎಕರೆ ಕೃಷಿ ಜಮೀನು ಮಾತ್ರ ಇದೆ. ಅದರ ಜೊತೆಗೆ ಕಿತ್ತು ತಿನ್ನುವ ಬಡತನ. ಇದರಿಂದ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಿದೆ.

ಪೂಜಾ ಡಾಕ್ಟರ್ ಆಗುವ ಕನಸಿನೊಂದಿಗೆ ಬಡತನದಲ್ಲೇ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಪಿಯುಸಿಯಲ್ಲಿ ಉತ್ತಮ ಅಂಕವನ್ನು ಪಡೆದು ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಹೊರಹೊಮ್ಮಿದ್ದಾರೆ. ಇದೀಗ ಪೂಜಾಗೆ ಸರ್ಕಾರಿ ಕೋಟಾದಲ್ಲಿ ಬಿದರಳ್ಳಿಯಲ್ಲಿರುವ ಈಸ್ಟ್ ಪಾಯಿಂಟ್ ಮೆಡಿಕಲ್ ಸೈನ್ಸ್ & ರಿಸರ್ಚ್ ಸೆಂಟರ್‍ನಲ್ಲಿ ಎಂಬಿಬಿಎಸ್ ಸೀಟು ಸಿಕ್ಕಿದೆ. ಆದರೆ ಎಂಬಿಬಿಎಸ್ ಓದಲು ತುಂಬಾ ಹಣ ಬೇಕಾಗಿರುವುದರಿಂದ ಯಾರಾದರೂ ದಾನಿಗಳು ಫೀಸ್ ವ್ಯವಸ್ಥೆ ಮಾಡಿ ಎಂದು ವಿನಯದಿಂದ ಕೇಳಿಕೊಳ್ಳುತ್ತಿದ್ದಾರೆ.

ಈ ಅರಳು ಪ್ರತಿಭೆಯ ಆಸಕ್ತಿಯನ್ನು ನೋಡಿ ಸ್ಥಳೀಯ ಬಾರ್‍ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿರುವ 3-4 ಮಂದಿ ಸ್ನೇಹಿತರು ಪೂಜಾಗೆ ಎಂಬಿಬಿಎಸ್ ವಿದ್ಯಾಭ್ಯಾಸದ ಫೀಸ್ ಕಟ್ಟಲು ಮುಂದಾಗಿದ್ದಾರೆ. ಆದರೆ ವೈದ್ಯಕೀಯ ಶಿಕ್ಷಣ ದುಬಾರಿಯಾಗಿದ್ದರಿಂದ ಅವರು ನೀಡುವ ಹಣ ಸಲಾದು. ಆದ್ದರಿಂದ ಪೂಜಾ ಸಹಾಯ ಕೇಳಿಕೊಂಡು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ.

ಪೂಜಾಗೆ ಈಗಾಗಲೇ ಎಂಬಿಬಿಎಸ್ ಸೀಟ್ ದೊರೆತಿದೆ. ಆದರೆ ಬಡ ರೈತನ ಮಗಳು ಡಾಕ್ಟರ್ ಆಗಲು ಯಾರಾದರು ಸ್ವಲ್ಪ ಹಣಕಾಸಿನ ಸಹಾಯ ಮಾಡಿದರೆ ಮಾತ್ರ ಆಕೆಯ ಕನಸು ಈಡೇರಲಿದೆ. ಆದ್ದರಿಂದ ಈ ಬಡ ರೈತನ ಮಗಳಿಗೆ ಯಾರಾದರೂ ಸಹಾಯ ಮಾಡಲಿ ಎನ್ನುವುದೇ ನಮ್ಮ ಆಶಯವಾಗಿದೆ.

https://youtu.be/qkSZDSLwI6w

Comments

Leave a Reply

Your email address will not be published. Required fields are marked *