ನಿರ್ಮಲಾ ಸೀತಾರಾಮನ್ ಹೆಗಲಿಗೆ ದೇಶದ ರಕ್ಷಣೆಯ ಹೊಣೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪುನಾರಚನೆಯಾಗಿದ್ದು, ಇಲ್ಲಿಯವರೆಗೆ ವಾಣಿಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ದೇಶದ ರಕ್ಷಣಾ ಸಚಿವೆಯಾಗಿ ನೇಮಕಗೊಂಡಿದ್ದಾರೆ.

58 ವರ್ಷದ ನಿರ್ಮಲಾ ಸೀತಾರಾಮನ್ ಅವರು ಆಯ್ಕೆಯಾಗುವ ಮೂಲಕ ಪೂರ್ಣಾವಧಿಯಾಗಿ ರಕ್ಷಣಾ ಖಾತೆಯನ್ನು ಹೊಂದಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ರಕ್ಷಣೆಯ ಹೊಣೆ ಹೊತ್ತಿದ್ದರು. ಪ್ರಧಾನಿ ಹುದ್ದೆಯೊಂದಿಗೆ ಜೊತೆ 1982 ರವರೆಗೂ ಈ ಖಾತೆಯನ್ನು ನಿರ್ವಹಣೆ ಮಾಡಿದ್ದರು.

ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

ವಾಣಿಜ್ಯ ಖಾತೆಯನ್ನು ನಿಭಾಯಿಸುತ್ತಿದ್ದ ನಿರ್ಮಲಾ ಸೀತಾರಾಮನ್ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿದ್ದರು.

ಅಧಿಕಾರಕ್ಕೆ ಏರಿದ ಮೋದಿ ಸರ್ಕಾರದಲ್ಲಿ ಆರಂಭದ ದಿನಗಳಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ರಕ್ಷಣೆಯ ಹೊಣೆ ಹೊತ್ತಿದ್ದರು. ಇದಾದ ಬಳಿಕ ಮನೋಹರ್ ಪರಿಕ್ಕರ್ ಈ ಖಾತೆ ಒಲಿದಿತ್ತು. ಗೋವಾ ಮುಖ್ಯಮಂತ್ರಿ ಪಟ್ಟವನ್ನು ಅಲಂಕರಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಖಾತೆಗೆ 2017ರ ಮಾರ್ಚ್ ನಲ್ಲಿ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಈ ಖಾತೆಯನ್ನು ಮತ್ತೆ ಅರುಣ್ ಜೇಟ್ಲಿ ನೋಡಿಕೊಳ್ಳುತ್ತಿದ್ದರು.

ರೈಲ್ವೇ ಸಚಿವಾಲಯನ್ನು ನೋಡಿಕೊಳ್ಳುತ್ತಿದ್ದ ಸುರೇಶ್ ಪ್ರಭು ಅವರಿಗೆ ವಾಣಿಜ್ಯ ಖಾತೆಯನ್ನು ನೀಡಲಾಗಿದೆ.

`ಇಂದು ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಂಪುಟ ಪುನಾರಚನೆಯಾಗಿದ್ದು ಹೊಸ ಖಾತೆ ಹೆಗಲಿಗೇರಿಸಿಕೊಂಡ ಎಲ್ಲಾ ಸಚಿವರುಗಳಿಗೂ ಅಭಿನಂದನೆಗಳು. ಅವರ ಅನುಭವ ಮಂತ್ರಿ ಮಂಡಲದ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಧರ್ಮೇಂದ್ರ ಪ್ರಧಾನ್, ನಿರ್ಮಲಾ ಸೀತರಾಮನ್, ಮುಕ್ತಲ್ ಅಬ್ಬಾಸ್ ನಖ್ವಿ ಹಾಗೂ ಪಿಯೂಷ್ ಗೋಯಲ್ ಅವರಿಗೆ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶೇಷ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

 

Comments

Leave a Reply

Your email address will not be published. Required fields are marked *