ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ಸಾವು

ದಾವಣಗೆರೆ: ಕುರಿ ಕಾಯಲು ಹೋಗಿದ್ದ ಕುರಿಗಾಹಿಯೊಬ್ಬರು ಹರಿದು ಬಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಎರ್ಲಕಟ್ಟೆ ಗ್ರಾಮದಲ್ಲಿ ನಡೆದಿದೆ.

ಮಡ್ರಳ್ಳಿ ಅರಣ್ಯ ಪ್ರದೇಶದ ಬಳಿ ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಈ ಘಟನೆ ಸಂಭವಿಸಿದೆ. ಮಂಜಣ್ಣ (23)ಮೃತ ದುರ್ದೈವಿ.

ಮಡ್ರಳ್ಳಿಯಲ್ಲಿ ರಸ್ತೆ ಮೇಲೆ ಮಂಜಣ್ಣ ಅವರು ಕುರಿ ಕಾಯಲು ಹೋಗಿದ್ದಾಗ ಮಳೆಗೆ ಹರಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದ್ದಾರೆ. ಈ ವಿದ್ಯುತ್ ಆಘಾತದಿಂದ ಅವರ ಸೊಂಟದ ಕೆಳಗಿನ ಭಾಗ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕಾಗಿದ್ದ ಮಂಜಣ್ಣ ಅವರ ಕುಟುಂಬದ ಮೇಲೆ ಸೂತಕದ ಛಾಯೆ ಕವಿದಿದೆ. ವಿದ್ಯುತ್ ತಂತಿ ಬಲಿ ತೆಗೆದುಕೊಂಡಿದ್ದರಿಂದ ಬೆಸ್ಕಾಂ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗಳೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *