ಡ್ರೈವರ್ ಕೈ ಕಚ್ಚಿ ಕಿಡ್ನ್ಯಾಪ್ ಆಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಬಚಾವ್!

ಮೈಸೂರು: ಇಲ್ಲಿನ ನಂಜನಗೂಡು ಪಟ್ಟಣದಲ್ಲಿ ಹಾಡುಹಗಲೇ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನಿಸಲಾಗಿರೋ ಘಟನೆಯೊಂದು ಬೆಳಕಿಗೆ ಬಂದಿದೆ.

ಮಂಡ್ಯ ಮೂಲದ ರಾಧಾ ಅಪಹರಣಕ್ಕೆ ಒಳಗಾಗಿ ನಂತರ ತಪ್ಪಿಸಿಕೊಂಡು ಬಂದಿರೋ ಯುವತಿ. ಚಾಮರಾಜನಗರದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ರಾಧಾ, ತನ್ನ ಪರಿಚಯಸ್ಥರ ನೋಡಲು ನಂಜನಗೂಡಿಗೆ ಬಂದಿದ್ದರು.

ನಂಜನಗೂಡಿನ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಲ್ಲೆ ಇದ್ದ ಅಪರಿಚಿತ ಮಹಿಳೆ ರಾಧಾ ಜೊತೆ ಸಂಭಾಷಣೆಯಲ್ಲಿ ತೊಡಗಿದ್ದಾಳೆ. ಆಗ, ರಾಧಾ ಹೇಳಿದ ತನ್ನ ಪರಿಚಯಸ್ಥರು ತನಗೂ ಪರಿಚಯಸ್ಥರೆ ಎಂದು ಹೇಳಿದ ಮಹಿಳೆ, ನಿಮ್ಮನ್ನು ಡ್ರಾಪ್ ಮಾಡ್ತೀನಿ ಎಂದು ಹೇಳಿ ಸ್ಕಾರ್ಪಿಯೋ ಕಾರನ್ನು ಹತ್ತಿಸಿದ್ದಾಳೆ.

ಸ್ವಲ್ಪ ದೂರ ಹೋದ ನಂತರ ಕಾರಿನ ಡ್ರೈವರ್ ನಡವಳಿಕೆಯಿಂದ ಅನುಮಾನಗೊಂಡ ರಾಧಾ ತನ್ನನ್ನು ಕಾರ್ ನಿಂದ ಇಳಿಸಲು ಹೇಳಿದ್ದಾರೆ. ಆಗ ರಾಧಾ ಬಾಯಿ ಮುಚ್ಚಲು ಮಹಿಳೆ ಮತ್ತು ಡ್ರೈವರ್ ಮುಂದಾಗಿದ್ದಾರೆ. ತಕ್ಷಣ ರಾಧಾ ಡ್ರೈವರ್ ಕೈ ಕಚ್ಚಿ ಕಾರ್ ನಿಂದ ಕೆಳಗೆ ಜಿಗಿದಿದ್ದಾರೆ.

ಡ್ರೈವರ್ ತಾನು ಪರಾರಿಯಾಗಲೆಂದು ಕಾರಿನ ವೇಗವನ್ನು ಹೆಚ್ಚಿಸಿದ ಪರಿಣಾಮ ಸ್ಕಾರ್ಪಿಯೋ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕಕ್ಕೆ ಸರಿದಿದೆ. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಡ್ರೈವರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ನಡೆದ ಘಟನೆಯ ವಿವರ ನೀಡಿದ್ದಾರೆ. ಪರಾರಿಯಾಗಿರುವ ಇಬ್ಬರು ಯಾರು? ಕಿಡ್ನ್ಯಾಪಿಗೆ ಯತ್ನಿಸಿದ್ದು ಯಾಕೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Comments

Leave a Reply

Your email address will not be published. Required fields are marked *