ಅಂಧನಾದ್ರೂ, ಟೀ ಮಾರಿ ಸ್ವಾಭಿಮಾನದ ಬದುಕು ಸಾಗಿಸ್ತಿದ್ದಾರೆ ತಿಪಟೂರಿನ ಯೋಗೇಂದ್ರಾಚಾರ್

ತುಮಕೂರು: ಸಾಧಿಸುವ ಹಠ. ಸ್ವಾಭಿಮಾನ ಇದ್ದರೆ ಎಂಥವರೂ ಸಾಧನೆ ಮಾಡ್ತಾರೆ ಅನ್ನೋದಕ್ಕೆ ಇವತ್ತಿನ ಪಬ್ಲಿಕ್ ಹೀರೋ ನಿದರ್ಶನ. ಬಾಲ್ಯದಲ್ಲಿ ಇದ್ದಕ್ಕಿದ್ದಂತೆ ಅಂಧನಾದರೂ ಅಂದದ ಜೀವನ ಕಟ್ಟಿಕೊಂಡಿರುವ ತಿಪಟೂರಿನ ಯೋಗೇಂದ್ರಾಚಾರ್ ಹಿಂದೆ ಒಂದು ಭಾವನಾತ್ಮಕ ಕಥೆಯೂ ಇದೆ.

ಹೌದು. ಬಾಲ್ಯದಲ್ಲಿ ಎಲ್ಲರಂತಿದ್ದ ಯೋಗೇಂದ್ರಾಚಾರ್ 8 ವರ್ಷ ಆಗುವಷ್ಟರಲ್ಲಿ ಅಂಧನಾಗಿದ್ದಾರೆ. ಆದರೂ ಸ್ವಾಭಿಮಾನದ ಜೀವನ ನಡೆಸ್ತಿದ್ದಾರೆ. ತಿಪಟೂರು ನಗರದ ಹಾಸನ ಸರ್ಕಲ್‍ನಲ್ಲಿ ಚಹಾ ತಯಾರಿಸಿ ಬದುಕು ಸಾಗಿಸುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಯೋಗೇಂದ್ರಾಚಾರ್ ತಮ್ಮ ರುಚಿಯಾದ ಚಹಾದಿಂದಲೇ ಪ್ರಸಿದ್ಧಿ ಪಡೆದಿದ್ದಾರೆ.

ಇವರು ತಯಾರಿಸೋ ಟೀ ಗಾಗಿ ಜನ ಹುಡುಕಿಕೊಂಡು ಬರ್ತಾರೆ. ಸಂಜೆ 6 ರಿಂದ ರಾತ್ರಿ 12 ಗಂಟೆವರೆಗೆ ವ್ಯಾಪಾರ ನಡೆಸೋ ಇವರು 1 ಸಾವಿರದಿಂದ ಒಂದೂವರೆ ಸಾವಿರ ರೂಪಾಯಿ ವ್ಯಾಪಾರ ಮಾಡ್ತಾರೆ. ಟೀ ಜೊತೆಗೆ ನ್ಯೂಡಲ್ಸ್, ಜ್ಯೂಸ್, ಬನ್ ರೋಸ್ಟ್‍ಗಳನ್ನೂ ಸ್ವತಃ ಇವರೇ ತಯಾರು ಮಾಡ್ತಾರೆ.

ಪದವಿ ತನಕ ವ್ಯಾಸಂಗ ಮಾಡಿರೋ ಇವರು ಮೊದಲಿಗೆ ವೈರ್ ಚೇರ್ ಹೆಣೀತಿದ್ರು. ನಂತರ ಎಸ್‍ಟಿಡಿ ಬೂತ್ ಇಟ್ಟುಕೊಂಡಿದ್ರು. ಆದ್ರೆ, ಮೊಬೈಲ್ ಬಂದ್ಮೇಲೆ ಎಸ್‍ಟಿಡಿ ಬೂತ್ ಮುಚ್ಚಿ ಟೀ ವ್ಯಾಪಾರಿಯಾಗಿದ್ದಾರೆ. ಹೆಂಡತಿ ವಿಚ್ಛೇದನ ನೀಡಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಇವರೇ ತಾಯಿ-ತಂದೆ. ಜೊತೆಗೆ, ಇಬ್ಬರು ತಂಗಿಯರಿಗೆ ಮದುವೆ ಮಾಡಿಸಿದ್ದು, ವೃದ್ಧ ಪೋಷಕರ ಜವಾಬ್ದಾರಿ ಕೂಡ ಇವರ ಮೇಲಿದೆ.

ಇಷ್ಟೆಲ್ಲಾ ಭಾರ ಹೆಗಲ ಮೇಲಿದ್ದರೂ ಕೊಂಚವೂ ವಿಚಲಿತರಾಗದ ಯೋಗೇಂದ್ರಾಚಾರ್, ದಿಟ್ಟಹೆಜ್ಜೆ ಹಿಟ್ಟು ಸ್ವಾಭಿಮಾನದಿಂದ ಬದುಕು ಸಾಗಿಸ್ತಾರೆ ಬಂದಿದ್ದಾರೆ.

https://www.youtube.com/watch?v=D4-0e1j9UN0

Comments

Leave a Reply

Your email address will not be published. Required fields are marked *