ಧಾರವಾಡ: ಕಳ್ಳತನ ಮಾಡುವಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಕಳ್ಳರಿಬ್ಬರು ಬಾವಿಗೆ ಹಾರಿದ್ದಾರೆ.
ಬುಧವಾರ ನಗರದ ಮಹಿಷಿ ರಸ್ತೆಯಲ್ಲಿರುವ ರಶ್ಮಿ ಎಂಬವರ ಮನೆಯನ್ನು ಕಳ್ಳತನ ಮಾಡಲು ಶಾನು ಹಾಲಭಾವಿ ಹಾಗೂ ವಾಸೀಮ್ ಬಾಳೆಕುಂದ್ರಿ ಎಂಬ ಇಬ್ಬರೂ ಪ್ಲಾನ್ ಮಾಡಿದ್ದರು. ಇವರಿಬ್ಬರೂ ಕಳ್ಳತನ ಮಾಡುವಾಗ ಪೊಲೀಸರನ್ನು ಕಂಡ ಕೂಡಲೇ ಓಡಿ ಹೋಗಿ ಬಾವಿಗೆ ಹಾರಿದ್ದಾರೆ. ಶಾನು ಮತ್ತು ವಾಸೀಮ್ ಇಬ್ಬರೂ ನಗರದ ಲಕ್ಷ್ಮೀ ಸಿಂಗನಕೇರಿ ಬಡಾವಣೆ ನಿವಾಸಿಗಳಾಗಿದ್ದಾರೆ.

ಶಾನು ಹಾಲಭಾವಿ ಹಾಗೂ ವಾಸೀಮ್ ಬಾಳೆಕುಂದ್ರಿ ಇಬ್ಬರೂ ರಶ್ಮಿಯವರ ಮನೆಯ ಸೋಲಾರ್‍ನಲ್ಲಿ ತಾಮ್ರದ ತಂತಿಯ ಕಳ್ಳತನಕ್ಕೆ ಬಂದಿದ್ದರು. ರಶ್ಮಿ ಕುಟುಂಬಸ್ಥರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ವಾಹನ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಭಯಭೀತರಾದ ಇಬ್ಬರೂ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದಿದ್ದಾರೆ. ಕೊನೆಗೆ ಪೊಲೀಸರು ಬಾವಿಗಿಳಿದು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ನಗರದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





Leave a Reply