ಬೆಂಗ್ಳೂರಲ್ಲಿ ದಾಖಲೆ ಮಳೆ- ಜನಜೀವನ ಅಸ್ತವ್ಯಸ್ತ

ಬೆಂಗಳೂರು: ಸ್ವಾತಂತ್ರ್ಯದ ಸಂಭ್ರಮದ ದಿನ ಬೆಂಗ್ಳೂರಲ್ಲಿ ವರುಣನ ಆರ್ಭಟ ಜೋರಾಗಿದೆ. ತಡರಾತ್ರಿ 3ರ ಸುಮಾರಿಗೆ ಶುರುವಾದ ಮಳೆ ಎಡಬಿಡದೆ ಸುರಿಯುತ್ತಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಶಾಂತಿನಗರ, ವಿಲ್ಸನ್ ಗಾರ್ಡನ್, ಡೈರಿಸರ್ಕಲ್, ಮಡಿವಾಳ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್ ನಲ್ಲಿ ಧಾರಾಕಾರ ಮಳೆ ಸುರಿದಿದೆ. ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ ಹೆದ್ದಾರಿ ಹೊಳೆಯಂತೆ ತುಂಬಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ವಾಹನಗಳೊಳಗೆ ನೀರು ನುಗ್ಗಿ ನಡುರಸ್ತೆಯಲ್ಲೇ ಕೆಟ್ಟು ನಿಂತಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ. ಏಕಾಏಕಿ ಸುರಿದ ಮಳೆಗೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

ನಗರದ ದಕ್ಷಿಣ ಭಾಗದಲ್ಲಿ ದಾಖಲೆಯ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಲ್ಲಿ ವಾಸವಾಗಿರುವ ಜನ ನಿದ್ದೆಯನ್ನೂ ಮಾಡದೇ ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕುವಲ್ಲಿ ನಿರತರಾಗಿದ್ದಾರೆ.

ಬೆಂಗಳೂರಲ್ಲಿ ದಾಖಲೆಯ 100 ಎಂಎಂ ಗೂ ಹೆಚ್ಚು ಮಳೆಯಾಗಿದೆ. ಮಹದೇವಪುರ, ಕೆ.ಆರ್ ಪುರ, ಎಚ್‍ಎಸ್‍ಆರ್ ಲೇಔಟ್, ಬನ್ನೇರುಘಟ್ಟ ಭಾಗದಲ್ಲಿ 100 ಎಂಎಂ ಗೂ ಹೆಚ್ಚು ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *