20ರ ಯುವತಿ ಮೇಲೆ ಅತ್ಯಾಚಾರವೆಸಗಿ 4ನೇ ಮಹಡಿಯಿಂದ ತಳ್ಳಿದ ಸ್ನೇಹಿತ

ನವದೆಹಲಿ: 20 ವರ್ಷದ ಯುವತಿಯ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರವೆಸಗಿ, ಅರೆನಗ್ನ ಸ್ಥಿತಿಯಲ್ಲಿ ಕಟ್ಟಡದ ನಾಲ್ಕನೇ ಮಹಡಿಯಿಂದ ತಳ್ಳಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಇಲ್ಲಿನ ರೋಹಿಣಿ ಪ್ರದೇಶದ ಬೇಗಂಪುರ್‍ನಲ್ಲಿ ಆಗಸ್ಟ್ 10 ಹಾಗೂ 11ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಸದ್ಯ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಕೆ ಹೇಳಿಕೆ ನೀಡುವುದು ಬಾಕಿ ಇದೆ.

ನಡೆದಿದ್ದೇನು?: ಯುವತಿಯು ತನ್ನ ಮತ್ತಿಬ್ಬರು ಸ್ನೇಹಿತರು ಹಾಗೂ 22 ವರ್ಷದ ಆರೋಪಿ ಯುವಕನೊಂದಿಗೆ ಹೊರಗೆ ಹೋಗಿದ್ದರು. ನಾಲ್ವರೂ ಬೈಕ್‍ನಲ್ಲಿ ಹೋಗಿದ್ದು ಪಂಜಾಬಿ ಬಾಗ್ ಬಳಿ ಪೊಲೀಸರು ಇವರನ್ನ ತಡೆದಿದ್ದರು. ಸೂಕ್ತ ದಾಖಲೆಗಳು ಇಲ್ಲವಾದ್ದರಿಂದ ಪೊಲೀಸರು ಬೈಕ್ ಜಪ್ತಿ ಮಾಡಿದ್ದರು. ನಂತರ ಆರೋಪಿಯು ಬೈಕ್ ಬದಲು ತನ್ನ ಮನೆಯಿಂದ ಕಾರ್ ತರುತ್ತೇನೆ ಎಂದಿದ್ದ. ಹೀಗಾಗಿ ಎಲ್ಲರೂ ಆಟೋರಿಕ್ಷಾದಲ್ಲಿ ಹೊರಟರು.

ಬೇಗಂಪುರ್ ತಲುಪಿದ ನಂತರ ಆರೋಪಿಯು ಕಾರ್ ತರುವುದಾಗಿ ಹೇಳಿ ಯುವತಿಯನ್ನು ಮಾತ್ರ ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಆಕೆಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ. ಆಕೆ ಇದಕ್ಕೆ ವಿರೋಧಿಸಿದ್ದಕ್ಕೆ ನಾಲ್ಕನೇ ಮಹಡಿಯಿಂದ ತಳ್ಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಜನರು ಕಟ್ಟಡದ ಬಳಿ ಧಾವಿಸಿ ಯುವತಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯು ಯುವತಿ ಮೇಲೆ ಬಲಾತ್ಕಾರ ಮಾಡಿದ್ದು, ಆಕೆ ವಿರೋಧಿಸಿದಾಗ ಮೇಲಿನಿಂದ ತಳ್ಳಿದ್ದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಯುವತಿ ಅರೆನಗ್ನ ಸ್ಥಿತಿಯಲ್ಲಿ ಬಿದ್ದಿದ್ದು ಪತ್ತೆಯಾಗಿದೆ.

ಘಟನೆ ನಡೆದಾಗ ಮತ್ತೊಬ್ಬ ವ್ಯಕ್ತಿಯೂ ಸ್ಥಳದಲ್ಲಿದ್ದ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ಪೊಲೀಸರು ಈವರೆಗೆ ಒಬ್ಬ ಆರೋಪಿಯನ್ನು ಮಾತ್ರ ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *