3 ತಿಂಗಳ ಹಿಂದೆ ದುಬೈಗೆ ಹೋಗಿ ಸುರಕ್ಷಿತವಾಗಿ ಕೊಪ್ಪಳಕ್ಕೆ ಮರಳಿದ ಮುಸ್ಲಿಮ್ ಮಹಿಳೆ

ಕೊಪ್ಪಳ: ದುಬೈಯಲ್ಲಿ ಕಿರುಕುಳಕ್ಕೊಳಗಾಗಿದ್ದ ಕೊಪ್ಪಳದ ಮಹಿಳೆ ಚಾಂದ್ ಸುಲ್ತಾನ್ ಗುರುವಾರ ತವರಿಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಕುರಾನ್ ಕಲಿಸಲೆಂದು ಮಂಗಳೂರು ಮೂಲದ ಏಜೆಂಟ್ ಮೂಲಕ ದುಬೈಗೆ ಹೋಗಿದ್ದೆ. ದುಬೈಗೆ ಹೋದ ಬಳಿಕ ಮನೆ ಕೆಲಸದ ಜೊತೆಗೆ ಶೌಚಾಲಯ ಸ್ವಚ್ಛಗೊಳಿಸಲು ಹೇಳುತ್ತಿದ್ದರು. ನಾನು ನಿರಾಕರಿಸಿದ್ದರೆ, ಮನೆ ಮಾಲೀಕರು ನನಗೆ ಕಿರುಕುಳ ನೀಡುತ್ತಿದ್ದರು ಎಂದು ದುಬೈನಲ್ಲಾದ ತೊಂದರೆಯನ್ನು ವಿವರಿಸಿದರು.

ಗೆಸ್ಟ್ ಹೌಸ್ ಕೋಣೆಯಲ್ಲಿ ಕೂಡಿಹಾಕಿ ಊಟಕ್ಕೆಂದು ಎರಡು ಬ್ರೆಡ್ ಕೊಡುತ್ತಿದ್ದರು. ಜೈಲಿನಲ್ಲಿ ಕೈದಿಗಳನ್ನು ನೋಡುಕೊಳ್ಳುವಂತೆ ನನ್ನನ್ನು ನೋಡುತ್ತಿದ್ದರು. ನಾನು ಮತ್ತೆ ಭಾರತಕ್ಕೆ ಮರಳುವುದಿಲ್ಲ, ಇಲ್ಲಿಯೇ ಸಾಯುತ್ತೇನೆ ಎಂದುಕೊಂಡಿದ್ದೆ. ಇನ್ನು ನಾನು ಬದುಕಿರುವವರೆಗೂ ಮತ್ತೆ ದುಬೈಗೆ ಹೋಗುವುದೇ ಇಲ್ಲ. ಅಲ್ಲಿ ಪಡಬಾರದ ಯಾತನೆಯನ್ನು ಅನುಭವಿಸಿದ್ದೇನೆ. ನಮ್ಮ ಮಕ್ಕಳ ಹಾಗೂ ನನ್ನ ಪತಿ ಮುಖ ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಅವರು ತಿಳಿಸಿದರು.

ನಾನು ಸ್ವದೇಶಕ್ಕೆ ಮರಳಲು ಸಹಕರಿಸಿದ್ದಕ್ಕೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಮಾಧ್ಯಮಗಳಿಗೆ ಚಾಂದ್ ಸುಲ್ತಾನ್ ಧನ್ಯವಾದ ಹೇಳಿದರು. ದುಬೈಯಿಂದ ಆಗಮಿಸಿದ ಚಾಂದ್ ಸುಲ್ತಾನ್ ಅವರಿಗೆ ಸಂಸದ ಸಂಗಣ್ಣ ಕರಡಿಯವರು ಮನೆಯಲ್ಲಿ ಸನ್ಮಾನ ಮಾಡಿದರು.

ದುಬೈನಲ್ಲಿ ಆಗುತ್ತಿದ್ದ ಕಿರುಕುಳದ ವಿಚಾರವನ್ನು ಚಾಂದ್ ಸುಲ್ತಾನ್ ಪತಿಗೆ ತಿಳಿಸಿ ಮರಳಿ ಸ್ವದೇಶಕ್ಕೆ ಬರಲು ಪ್ರಯತ್ನ ಮಾಡಿ ಎಂದು ಕೇಳಿಕೊಂಡಿದ್ದರು. ಪತಿ ಬಾಬಾಜಾನ್ ಅವರು ಸಂಸದ ಸಂಗಣ್ಣ ಕರಡಿ ಬಳಿ ಈ ಎಲ್ಲ ವಿಚಾರಗಳನ್ನು ಹೇಳಿ ಮರಳಿ ಭಾರತಕ್ಕೆ ಬರಲು ಸಹಾಯ ಮಾಡಬೇಕೆಂದು ಮನವಿ ಮಾಡಿದ್ದರು. ಕುಟುಂಬದ ನೋವಿಗೆ ಸ್ಪಂದಿಸಿದ ಸಂಸದ ಸಂಗಣ್ಣ ಕರಡಿಯವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ತಿಳಿಸಿದ್ದರಿಂದ ಚಾಂದ್ ಸುಲ್ತಾನ್ ಮರಳಿ ಕೊಪ್ಪಳಕ್ಕೆ ಬಂದಿದ್ದಾರೆ.

ಇದನ್ನೂ ಓದಿ:ಕೊಪ್ಪಳದ ಮಹಿಳೆಗೆ ಸೌದಿಯಲ್ಲಿ ಕಿರುಕುಳ- ಪತ್ನಿಯ ರಕ್ಷಣೆ ಕೋರಿ ಸಂಸದರ ಮೊರೆ ಹೋದ ಪತಿ

 

Comments

Leave a Reply

Your email address will not be published. Required fields are marked *