ತವರಲ್ಲೇ ಮೋದಿ-ಶಾ ಜೋಡಿಗೆ ಮುಖಭಂಗ-ಸೋನಿಯಾ ಬಂಟನಿಗೆ ರಾಜಕೀಯ ಜೀವದಾನ

ಅಹಮದಾಬಾದ್: ಜಿದ್ದಾಜಿದ್ದಿ, ಪ್ರತಿಷ್ಠೆ, ತಂತ್ರ-ಪ್ರತಿತಂತ್ರಗಳ ನಡುವೆ ಸಾಕಷ್ಟು ನಾಟಕ, ತಿರುವುಗಳಿಗೆ ಸಾಕ್ಷಿಯಾದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್, ರಾಜಕೀಯ ಜೀವನಕ್ಕೆ ಕೊನೆಯಾಡುವ ತಂತ್ರ ಫಲಿಸಲೇ ಇಲ್ಲ. ಬರೋಬ್ಬರಿ ಸುಮಾರು ಏಳೂವರೆ ಗಂಟೆ ವಿಳಂಬವಾಗಿ ಪ್ರಕಟವಾದ ಫಲಿತಾಂಶದಲ್ಲಿ ಗಾಂಧಿ ಕುಟುಂಬದ ಪರಮಾಪ್ತ ರಾಜಕೀಯ ಜೀವದಾನ ಪಡೆದಿದ್ದಾರೆ. ಈ ಮೂಲಕ 44 ಶಾಸಕರ ಬೆಂಬಲದೊಂದಿಗೆ ಸತತ ಐದನೇ ಬಾರಿಗೆ ಸಂಸತ್ತಿನ ಮೇಲ್ಮನೆ ರಾಜ್ಯಸಭೆಗೆ ಮತ್ತೆ ಕಾಲಿಟ್ಟರು.

46 ಶಾಸಕರ ಮತ ಪಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದರು. ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ತಮ್ಮ ಸ್ಥಾನವನ್ನು ಮತ್ತೆ ಉಳಿಸಿಕೊಂಡರು. ಅಹ್ಮದ್ ಪಟೇಲ್ ವಿರುದ್ಧ ಕಣಕ್ಕಿಳಿದು ಕಾಂಗ್ರೆಸ್ ದಂಡನ್ನೇ ಕಕ್ಕಾಬಿಕ್ಕಿಯಾಗಿಸಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಬಿಜೆಪಿ ಮೂರನೇ ಅಭ್ಯರ್ಥಿ ಬಲವಂತ್ ಸಿಂಗ್ ರಜಪೂತ್‍ಗೆ 38 ಶಾಸಕರ ಬೆಂಬಲವಷ್ಟೇ ಸಿಕ್ಕಿದೆ. ಇತ್ತ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿರುವ ಅಮಿತ್ ಶಾ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಜೊತೆಗೆ ಶಾ ರಾಷ್ಟ್ರೀಯ ಅಧ್ಯಕ್ಷರಾದ ಮೂರು ವರ್ಷಗಳಲ್ಲಿ ಪಕ್ಷ ತನ್ನ ನೆಲೆಯನ್ನು ವಿಸ್ತರಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.

ರಾಜಕೀಯ ಜೀವದಾನ: ಅಹ್ಮದ್ ಪಟೇಲ್‍ಗೆ ಇದು ರಾಜಕೀಯ ಜೀವದಾನ ಎಂದರೆ ತಪ್ಪಲ್ಲ. ಮತದಾನಕ್ಕೂ ಮೊದಲೇ 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ರಿಂದ ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಮತ್ತೆ ಕಾಣಿಸಿಕೊಳ್ತಿನೋ ಅನ್ನೋ ಆತಂಕ ಎದುರಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಅಮಿತ್ ಶಾ-ಮೋದಿಯಿಂದ ಜಯವನ್ನು ಕಸಿದುಕೊಂಡು ಬೀಗಿದ್ದಾರೆ. ತಮ್ಮ ಗೆಲುವಿನ ಬೆನ್ನಲ್ಲೇ ಟ್ವೀಟ್ ಮಾಡಿದ ಅಹ್ಮದ್ ಪಟೇಲ್ ಇದು ಸತ್ಯಕ್ಕೆ ಸಂದ ಜಯ ಅಂದ್ರು. ಹಣ ಬಲ, ತೋಳ್ಬಲ, ಬೆದರಿಕೆ ತಂತ್ರಗಳ ವಿರುದ್ಧದ ಜಯ ಎಂದು ಬಣ್ಣಿಸಿದ್ದಾರೆ. ಇನ್ನು ಗೆಲುವಿನ ಬಳಿಕ ಗುಜರಾತ್ ವಿಧಾನಸಭೆ ಮುಂದೆ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಬಿಗ್ ಹೈಡ್ರಾಮಾ: ಮಂಗಳವಾರ ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಿ ಸಂಜೆ 6 ಗಂಟೆಗೆ ಫಲಿತಾಂಶ ಹೊರಬರಬೇಕಿತ್ತು. ಆದ್ರೆ ಸಂಜೆ 5 ಗಂಟೆ ವೇಳೆ ಗಾಂಧಿನಗರದಲ್ಲಿ ಕಾಂಗ್ರೆಸ್‍ನ ಅನಿರೀಕ್ಷಿತ ನಡೆ ಇಡೀ ಚಿತ್ರಣವನ್ನೇ ಬದಲಾಯಿಸಿತು. ಕೆಲವೇ ಹೊತ್ತಲ್ಲೇ ಆ ನಾಟಕ ದೆಹಲಿಗೆ ವರ್ಗವಾಯಿತು. ಪಿ ಚಿದಂಬರಂ ಸೇರಿದಂತೆ ಕಾಂಗ್ರೆಸ್ ಘಟಾನುಘಟಿಗಳ ನಿಯೋಗ ಒಂದೆಡೆಯಾದ್ರೆ, ಕೇಂದ್ರ ಕಾನೂನು ಸಚಿವ ರವಿಶಂಕರ್‍ಪ್ರಸಾದ್ ಸೇರಿದಂತೆ ಬಿಜೆಪಿ ನಿಯೋಗ ಮೂರು ಬಾರಿ ಆಯೋಗವನ್ನು ಸಂಧಿಸಿ ವಾದ-ಪ್ರತಿವಾದವನ್ನು ಮಂಡಿಸಿದ್ರು.

ಪಕ್ಷದ ಅಧಿಕೃತ ಏಜೆಂಟ್‍ಗೆ ಬ್ಯಾಲೆಟ್ ಪೇಪರ್ ತೋರಿಸದೇ ಬಿಜೆಪಿಯ ಏಜೆಂಟ್‍ಗೆ ಮತಪತ್ರ ತೋರಿಸಿದ್ದಾರೆ. ಹೀಗಾಗಿ ಶಾಸಕರಾದ ರಾಘವ್ ಜೀ ಮತ್ತು ಭೋಲಾಭಾಯ್ ಮತವನ್ನು ಅಸಿಂಧುಗೊಳಿಸುವಂತೆ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಆಯೋಗ ಎರಡೂ ಮತಗಳನ್ನು ಅಸಿಂಧುಗೊಳಿಸಿ ಮತ ಎಣಿಕೆಗೆ ಸೂಚಿಸಿತು. ಆದ್ರೆ ವಿಡಿಯೋದ ಸತ್ಯಾಸತ್ಯತೆಯನ್ನ ಬಿಜೆಪಿ ಪ್ರಶ್ನಿಸಿದೆ. ಈ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಮತ ಎಣಿಕೆಗೆ ಅಡ್ಡಿಪಡಿಸ್ತು ಕೂಡಾ. ಮೂಲಗಳ ಪ್ರಕಾರ ಬಿಜೆಪಿ ಇವತ್ತು ಸುಪ್ರೀಂಕೋರ್ಟ್ ಕದ ತಟ್ಟುವ ಸಾಧ್ಯತೆ ಕೂಡಾ ಇದೆ.

Comments

Leave a Reply

Your email address will not be published. Required fields are marked *