ಡಿಕೆಶಿಗೆ ರಾಖಿ ಕಟ್ಟಿ ಕರ್ನಾಟಕಕ್ಕೆ ಬೈ ಬೈ ಹೇಳಿದ ಗುಜರಾತ್ ಕೈ ಶಾಸಕರು

ಬೆಂಗಳೂರು: ಕರ್ನಾಟಕದಲ್ಲಿ ರಾಜಕೀಯ ತಲ್ಲಣಕ್ಕೆ ಕಾರಣವಾದ ಐಟಿ ದಾಳಿಯ ಕಾರಣ ಎನ್ನಲಾಗಿರುವ ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ ಕೊನೆಯಾಗಿದೆ. ವಿಶೇಷ ಅಂದ್ರೆ ರಕ್ಷಾ ಬಂಧನದ ಹಿನ್ನೆಲೆಯಲ್ಲಿ ಗುಜರಾತ್‍ನ ಕಾಂಗ್ರೆಸ್ ಶಾಸಕಿ ಕಾಮಿನಿ ಬಿ. ರಾಥೋಡ್ ಸಚಿವ ಡಿ.ಕೆ.ಶಿವಕುಮಾರ್‍ಗೆ ರಾಖಿ ಕಟ್ಟಿದರು.

ರೆಸಾರ್ಟ್‍ನಲ್ಲಿ ನಡೆದ ಸನ್ಮಾನದ ವೇಳೆ ಡಿಕೆಶಿ ಮತ್ತು ಡಿಕೆ ಸುರೇಶ್‍ಗೆ ರಾಖಿ ಕಟ್ಟಿದರು. ಇಬ್ಬರೂ ತಮ್ಮ ತಂಗಿಯನ್ನು ಹಾರೈಸಿ ಕಳುಹಿಸುವ ಮೂಲಕ 9 ದಿನಗಳವರೆಗೆ ಬೆಂಗಳೂರಿನ ಬಿಡದಿಯ ಈಗಲ್ಟನ್ ರೆಸಾರ್ಟ್‍ನಲ್ಲಿ ವಾಸವಿದ್ದ ಶಾಸಕರು ತಮ್ಮ ತವರೂರಿಗೆ ಮರಳಿದ್ದಾರೆ.

ಎರಡು ಐರಾವತ ಬಸ್‍ಗಳ ಮೂಲಕ ರೆಸಾರ್ಟ್‍ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳಿದರು. ಮಧ್ಯರಾತ್ರಿ 2.40ಕ್ಕೆ ಇಂಡಿಗೋ ವಿಮಾನ ಮೂಲಕ ಅಹಮದಾಬಾದ್‍ಗೆ ತೆರಳಿದರು. ಶಾಸಕರ ಆತಿಥ್ಯದ ಉಸ್ತುವಾರಿ ವಹಿಸಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಇಬ್ಬರೂ ಶಾಸಕರನ್ನು ಕಳುಹಿಸಿಕೊಟ್ಟರು.

ಇಂದು 44 ಮಂದಿ ಶಾಸಕರು ಅಹಮದಬಾದ್‍ನ ನಿಜಾನಂ ರೆಸಾರ್ಟ್‍ನಲ್ಲಿ ತಂಗಲಿದ್ದಾರೆ. ಇದಕ್ಕೂ ಮೊದಲು ರೆಸಾರ್ಟ್‍ನಲ್ಲಿ ಗುಜರಾತ್ ಶಾಸಕರನ್ನು ಮೈಸೂರಿನ ಪೇಟಾ ತೊಡಿಸಿ, ಹಾರ ಹಾಕಿ ಸನ್ಮಾನಿಸಲಾಯಿತು. ನಂತರ ಎಲ್ಲರೂ ಡಿಕೆಶಿ ಮತ್ತು ಡಿಕೆ ಸುರೇಶ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡರು.

ಬಳಿಕ ಮಾತಾಡಿದ ಇಂಧನ ಸಚಿವ ಡಿಕೆ ಶಿವಕುಮಾರ್, ಗುಜರಾತ್ ಕಾಂಗ್ರೆಸ್ ಶಾಸಕರು ಒಗ್ಗಟ್ಟಾಗಿದ್ದಾರೆ. ಅಹ್ಮದ್ ಪಟೇಲ್ ಗೆಲುವನ್ನು ಸಂಖ್ಯೆಯಷ್ಟೇ ನಿರ್ಧರಿಸುತ್ತೆ ಅಂತ ಹೇಳಿದ್ರು.

ಅಹ್ಮದ್ ಪಟೇಲ್‍ರನ್ನು ಗೆಲ್ಲಿಸಲೇಬೇಕೆಂದು ಶಾಸಕರು ಪಣ ತೊಟ್ಟಿದ್ದಾರೆ. ಇದು ರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಹೊಸ ಶಕ್ತಿ ತುಂಬಲಿದೆ. ತಮ್ಮ ರೆಸಾರ್ಟ್ ವಾಸ್ತವ್ಯದ ವೇಳೆಯೇ ನಡೆದ ಐಟಿ ದಾಳಿಯ ಹಿಂದೆ ರಾಜಕೀಯ ದ್ವೇಷವಿದೆ ಅಂತಾ ಗುಜರಾತ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಶಕ್ತಿಕಾಂತ್ ಘೋಯಿಲ್ ಹೇಳಿದ್ದಾರೆ. ಐಟಿ ದಾಳಿ ಬಗ್ಗೆ  ನಮ್ಮ ಮನೆಯಲ್ಲಿ ಏನು ಸಿಕ್ಕಿದೆ ಅನ್ನೋದ್ರ ಸಂಪೂರ್ಣ ಮಾಹಿತಿ ನಮ್ಮ ಬಳಿಯಿದೆ. ಬೇರೆಯವರ ಮನೆಯಲ್ಲಿದ್ದ ಸಿಕ್ಕಿದ್ದರ ಬಗ್ಗೆ ನಮಗೆ ಗೊತ್ತಿಲ್ಲ ಅಂತ ಡಿಕೆ ಸುರೇಶ್ ಹೇಳಿದ್ರು.

ಅಹಮದಾಬಾದ್‍ಗೆ ಬಂದಿಳಿದ ಶಾಸಕರನ್ನು ರಾಜ್ಯಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಬರಮಾಡಿಕೊಂಡರು. ಇದೇ ವೇಳೆ ಮಾತಾಡಿದ ಅಹ್ಮದ್ ಪಟೇಲ್ ಎಲ್ಲಾ ಶಾಸಕರು ನಮ್ಮೊಂದಿಗಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಗೆಲುವಾಗಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *