ಟಿವಿಯಲ್ಲಿ ನೋಡಿದ ಸ್ಟಂಟ್ ಮಾಡಲು ಹೋಗಿ 6ನೇ ಕ್ಲಾಸ್ ಬಾಲಕ ಸಾವು

ಹೈದರಾಬಾದ್: ಟಿವಿಯಲ್ಲಿ ಸಾಹಸ ದೃಶ್ಯವೊಂದನ್ನು ನೋಡಿ ಅದನ್ನು ಅನುಕರಿಸಲು ಹೋಗಿ 6ನೇ ತರಗತಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

11 ವರ್ಷದ ರಾಪಲ್ಲೆ ಕಾಶಿ ವಿಶ್ವನಾಥ್ ಶುಕ್ರವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇಲ್ಲಿನ ಪೆದ್ದಪಲ್ಲಿ ಜಿಲ್ಲೆಯ ಮಂಥನಿ ನಗರದ ನಿವಾಸಿಯಾದ ಬಾಲಕ ಬೆಂಕಿಯಿಂದ ಮಾಡುವ ಸಾಹಸ ಮಾಡಲು ಹೋಗಿ ಮರಣ ಹೊಂದಿದ್ದಾನೆ.

ಸಾಂದರ್ಭಿಕ ಚಿತ್ರ

ಮಂಗಳವಾರದಂದು ಬಾಲಕ ತನ್ನ ಅಜ್ಜಿಯ ಮನೆಯಲ್ಲಿದ್ದಾಗ ರಿಯಾಲಿಟಿ ಶೋವೊಂದರಲ್ಲಿ ಬಾಯಲ್ಲಿ ಸೀಮೆಎಣ್ಣೆ ಹಾಕಿಕೊಂಡು ಬೆಂಕಿಯನ್ನು ಊದುವ ಸಾಹಸ ದೃಶ್ಯವನ್ನ ನೋಡಿದ್ದ. ಇದನ್ನ ಆತ ಕೂಡ ಅನುಕರಣೆ ಮಾಡಲು ಮುಂದಾಗಿದ್ದಾನೆ. ಬಾಯಲ್ಲಿ ಸೀಮೆಎಣ್ಣೆ ತುಂಬಿಕೊಂಡು ಬೆಂಕಿ ಹಚ್ಚಿದ್ದಾನೆ. ಆದ್ರೆ ಆತ ಸೀಮೆಎಣ್ಣೆಯನ್ನು ಬಾಯಿಂದ ಉಗುಳುವಾಗ ಬೆಂಕಿಯ ಜ್ವಾಲೆಯಿಂದ ಸುಟ್ಟ ಗಾಯಗಳಾಗಿವೆ ಎಂದು ಇಲ್ಲಿನ ಎಸಿಪಿ ಅಪೂರ್ವಾ ರಾವ್ ಹೇಳಿದ್ದಾರೆ.

ಬಾಲಕನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Comments

Leave a Reply

Your email address will not be published. Required fields are marked *