ಸಚಿವ ರಮಾನಾಥ ರೈಗೆ ಗೃಹ ಇಲಾಖೆ ಖಾತೆ: ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ

ಉಡುಪಿ: ಗೃಹ ಇಲಾಖೆ ಸಚಿವ ರಮಾನಾಥ ರೈ ಪಾಲಾಗಲಿದೆ ಅನ್ನೋದನ್ನು ಮಾಧ್ಯಮಗಳಲ್ಲಿ ಓದಿ ಕೇಳಿ ತಿಳಿದುಕೊಂಡಿದ್ದೇನೆ. ರೈ ಅವರಿಗೆ ಗೃಹಖಾತೆ ಸಿಕ್ಕರೆ ಅದು ಬರೀ ಹೆಸರಿಗೆ ಮಾತ್ರವಾಗಲಿದೆ. ಆದ್ರೆ ನಿಜವಾದ ಗೃಹಸಚಿವ ಕೆಂಪಯ್ಯ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈ ಹೆಬ್ಬೆಟ್ಟು ಒತ್ತಲು ಮಾತ್ರ ಗೃಹಖಾತೆಗೆ ಉಪಯೋಗವಾಗುತ್ತಾರೆ. ಸಿಎಂ ಸಿದ್ದರಾಮಯ್ಯಗೆ ಕೆಂಪಯ್ಯ ಅನಿವಾರ್ಯವೆನ್ನೂದನ್ನು ಬಹಿರಂಗವಾಗಿ ತೋರ್ಪಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಕರಾವಳಿಯಲ್ಲಿ ಕೋಮು ಭಾವನಾತ್ಮಕ ವಿಚಾರ ಇಟ್ಟುಕೊಂಡು ಎರಡು ರಾಜಕೀಯ ಪಕ್ಷಗಳು ಚುನಾವಣೆಗೆ ಹೋಗುತ್ತಿದೆ. ಆದ್ರೆ ಇಬ್ಬರಿಗೂ ಈ ಎರಡು ಜಿಲ್ಲೆಗಳ ಅಭಿವೃದ್ಧಿ ಬೇಕಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ: ರಮಾನಾಥ್ ರೈ ಗೆ ಗೃಹ ಖಾತೆ ನೀಡಲು ಸಿಎಂ ಚಿಂತನೆ

ಮೈಸೂರಿನನಲ್ಲಿ ಸಿಎಂ ಆಡಿದ ಮಾತಿಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿರುವ ಕೆರೆಗಳಿಗೆ ನೀರು ಹಾಯಿಸಲು ಆಗದಿದ್ದರೆ ನಮ್ಮಲ್ಲಿರುವ ನಾಲ್ಕು ಜಲಾಶಯಗಳು ಪಕ್ಕದ ರಾಜ್ಯಕ್ಕೆ ನೀರು ಬಿಡುವುದಕ್ಕೆ ನಿರ್ಮಾಣ ಮಾಡಿದ್ದಾ ಎಂದು ಪ್ರಶ್ನಿಸಿ ಕಿಡಿಕಾರಿದರು.

ಬಿಜೆಪಿ ದೇಶಾದ್ಯಂತ ಇತರೆ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದೆ ಎಂದ ಕುಮಾರಸ್ವಾಮಿ, ಗುಜರಾತ್-ಬಿಹಾರದಲ್ಲಿ ಕಾಂಗ್ರೆಸ್ ಕಥೆ ಮಾಡಿದ್ದುಣ್ಣೋ ಮಹಾರಾಯನಂತಾಗಿದೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಜೆಡಿಎಸ್‍ನ 8 ಮಂದಿ ಶಾಸಕರನ್ನು ಕಾಂಗ್ರೆಸ್ ಸೆಳೆದುಕೊಂಡಿತು. ಈಗ ಅದಕ್ಕೆ ಈ ಸ್ಥಿತಿ ಎದುರಾಗಿದೆ. ಮೊದಲು ರಾಜ್ಯಕ್ಕೆ ರಕ್ಷಣೆ ಕೊಡಿ. ಆ ಮೇಲೆ ರೆಸಾರ್ಟ್ ನಲ್ಲಿರುವ ಗುಜರಾತ್ ಶಾಸಕರಿಗೆ ರಕ್ಷಣೆ ಕೊಡುವಿರಂತೆ ಎಂದು ಎಚ್‍ಡಿಕೆ ಚಾಟಿ ಬೀಸಿದರು.

Comments

Leave a Reply

Your email address will not be published. Required fields are marked *