ಎಲೆಕ್ಷನ್ ಹತ್ತಿರ ಬರಬೇಕಂತೆ- ಆವಾಗ್ಲೇ ಸ್ಲಂ ಜನರಿಗೆ ಮನೆ ಹಂಚ್ತಾರಂತೆ!

ಬೆಂಗಳೂರು: ಇದು ಮಹಾನಗರಿ ಬೆಂಗಳೂರಿನ ಸಿಂಗಾಪುರದ ಕಥೆ. ಇಲ್ಲಿ ಬಡವರಿಗಾಗಿ ಕಟ್ಟಿರೋ ಮನೆಗಳು ಹಂಚಿಕೆಯಾಗೋ ಬದಲು ಹಾಳಾಗಿ ಹೋಗುತ್ತಿವೆ. ಅಷ್ಟಕ್ಕೂ ಸ್ಲಂ ಬೋರ್ಡ್‍ನಿಂದ ನಿರ್ಮಾಣವಾಗಿರುವ ಮನೆಗಳನ್ನ ಹಂಚಿಕೆ ಮಾಡೋದಕ್ಕೆ ಎಲೆಕ್ಷನ್ ಹತ್ತಿರ ಬರಬೇಕು ಎಂದು ಹೇಳಲಾಗುತ್ತಿದೆ.

ಮನೆ ಹಂಚಿಕೆ ಮಾಡ್ಬೇಕಂದ್ರೆ ಮುಂದಿನ ವಿಧಾನಸಭಾ ಎಲೆಕ್ಷನ್ ಹತ್ತಿರ ಬರ್ಬೇಕು. ಆಗ ಹಂಚಿಕೆ ಮಾಡಿದ್ರೆ ಜನ ನಮ್ಮ ಪಕ್ಷಕ್ಕೆ ಓಟು ಒತ್ತುತ್ತಾರೆ. ಇದು ವಾರ್ಡ್ ನಂಬರ್ 11, ಕುವೆಂಪು ನಗರದ ಕಾಂಗ್ರೆಸ್ ಕಾರ್ಪೊರೇಟರ್ ಪಾರ್ಥಿಬರಾಜನ್ ಹಾಗೂ ಸಚಿವ ಕೃಷ್ಣಭೈರೇಗೌಡರ ಹೊಸ ವರಸೆ. ಬೆಂಗಳೂರಿನ ಸಿಂಗಾಪುರ ಲೇಔಟ್‍ನಲ್ಲಿ ಸ್ಲಂ ನಿವಾಸಿಗಳಿಗಾಗಿ ಮನೆಗಳನ್ನ ನಿರ್ಮಿಸಿ ಒಂದೂವರೆ ವರ್ಷ ಕಳೆದ್ರೂ, ಸುಮಾರು 425 ಮನೆಗಳು ಹಂಚಿಕೆ ಮಾಡದೆ ಹಾಗೇ ಉಳಿಸಿಕೊಂಡಿದ್ದಾರೆ.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿದ್ರೂ ಇಲ್ಲಿನ ಕಾರ್ಪೊರೇಟರ್ ಅನುಮತಿ ಇಲ್ಲದೆ ಯಾರೂ ಹಂಚಿಕೆ ಮಾಡೋಹಾಗಿಲ್ಲ. ಹೀಗಾಗಿ ಅಧಿಕಾರಿಗಳು ಕೂಡ ಅಸಹಾಯಕರಾಗಿದ್ದಾರೆ. ಇದೆಲ್ಲಾ ಕಾರ್ಪೊರೇಟರ್ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ. ಅಲ್ಲದೆ ದುಡ್ಡಿಗೆ ಮನೆ ಮಾರಿಕೊಳ್ತಿದ್ದಾರೆ ಅಂತ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಮನೆಗಳು ನಿರ್ಮಿಸಿದ್ದಾಯ್ತು, ಇನ್ನೇನು ಹಂಚಿಕೆಯಾಯ್ತು ಅನ್ನುವಷ್ಟರಲ್ಲಿ ಎಲೆಕ್ಷನ್ ಗುಮ್ಮ ಸ್ಲಂ ನಿವಾಸಿಗಳನ್ನ ಹಿಂಡಿ ಹಿಪ್ಪೆಯಾಗಿಸಿದೆ. ಸ್ಲಂ ಬೋರ್ಡ್ ಅಧಿಕಾರಿಗಳೇ ಮುಂದೆ ನಿಂತು ಮನೆ ಹಂಚಿಕೆ ಮಾಡಬೇಕಿದೆ.

 

Comments

Leave a Reply

Your email address will not be published. Required fields are marked *