3 ವರ್ಷ ಪ್ರೀತಿಸಿ ಮುದುವೆಯಾದ್ರು- ರಕ್ಷಣೆಗಾಗಿ ಕೋರ್ಟ್ ಮೆಟ್ಟಿಲೇರಿದ ಧಾರವಾಡದ ಯುವ ಜೋಡಿ!

ಧಾರವಾಡ: ಅವರು ಯುವ ಪ್ರೇಮಿಗಳು. ಜಾತಿಯ ಹಂಗನ್ನ ಮರೆತು 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ್ರು. ಆದರೆ ಈಗಾ ಅದೇ ಜಾತಿ ಅವರ ಪ್ರೀತಿಗೆ ಅಡ್ಡ ಬಂದಿದೆ. ಯುವತಿಯ ಮನೆಯವರು ಆಕೆಯನ್ನು ಗಂಡನಿಂದ ಬೇರೆ ಮಾಡಲು ಹರಸಾಹಸ ಪಡುತಿದ್ದಾರೆ.

ಹೌದು. ಧಾರವಾಡ ಹೊರವಲಯದ ಎತ್ತಿನಗುಡ್ಡ ಗ್ರಾಮದ ಯುವ ಜೋಡಿ ಎತ್ತಿನಗುಡ್ಡದ ಪವಿತ್ರ (23)ಹಾಗೂ ದೇವೆಂದ್ರಗೌಡ(26) ಇದೀಗ ರಕ್ಷಣೆ ಕೊರಿ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಪ್ರೀತಿಸಿ ಮದುವೆಯಾದ ಯುವ ಜೋಡಿಗೆ ಯುವತಿಯ ಮನೆಯವರು ಕೊಲೆ ಬೆದರಿಕೆ ಹಾಕಿದ್ದಾರೆ.

ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ರು. ಈ ಹಿನ್ನೆಲೆ ಕಳೆದ ಜೂನ್ 29 ರಂದು ಧಾರವಾಡ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೊಂದಣಿ ಕೂಡಾ ಮಾಡಿಸಿದ್ರು. ಇದಾದ ನಂತರ ಇವರು ಹನಿಮೂನ್‍ಗೆ ಬೇರೆ ಜಿಲ್ಲೆಗೆ ಹೋದಾಗ, ಪವಿತ್ರ ಮನೆಯವರು ಉಪನಗರ ಪೊಲೀಸ್ ಠಾಣೆಯಲ್ಲಿ ಪವಿತ್ರ ಕಿಡ್ನಾಪ್ ಆಗಿದ್ದಾಳೆ ಎಂದು ದೂರನ್ನ ನೀಡಿದ್ದಾರೆ. ಈ ವಿಷಯ ತಿಳಿದ ಈ ಯುವ ಜೋಡಿ, ಧಾರವಾಡಕ್ಕೆ ಬಂದಾಗ ಇವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. ಜಾತಿ ಬೇರೆ ಇರುವ ಕಾರಣ ನಮ್ಮಿಬ್ಬರನ್ನು ಬೇರೆ ಮಾಡಲು ನಮ್ಮ ತಂದೆ ಈ ರೀತಿ ಹಲ್ಲೆ ನಡೆಸುತಿದ್ದಾರೆ ಅಂತಾ ಪವಿತ್ರ ತನ್ನ ಪತಿಯ ಜೊತೆ ಧಾರವಾಡ ಜಿಲ್ಲಾ ನ್ಯಾಯಾಲಯದ ಮೇಟ್ಟಿಲೇರಿ, ಕುಟುಂಬದವರಿಂದ ರಕ್ಷಣೆ ಕೊರಿ ಖಾಸಗಿ ದೂರನ್ನ ಸಲ್ಲಿಸಿದ್ದಾರೆ.

ಈ ಯುವತಿ ಬಿಇ ಇಂಜಿನಿಯರಿಂಗ್ ಮಾಡಿದ್ರೆ, ಯುವಕ ಸ್ವಂತ ಕಾರುಗಳನ್ನ ಇಟ್ಟುಕೊಂಡು ಟ್ರಾವೆಲ್ಸ್ ನಡೆಸುತ್ತಿದ್ದಾರೆ. ಯುವತಿ ಮೇಲ್ಜಾತಿಯವಳು, ಆದರೆ ಯುವಕ ಕೆಳ ಜಾತಿಯಾವನಾಗಿದ್ದರಿಂದ ಈ ರೀತಿ ಮದುವೆಗೆ ಅಡ್ಡಿಪಡಿಸಿ, ಕೊಲೆಗೆ ಯತ್ನ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಸದ್ಯ ರಕ್ಷಣೆ ಕೋರಿ ನ್ಯಾಯಾಲಯದ ಮೇಟ್ಟಿಲೇರಿರುವ ಇವರು, ಏನೇ ಆದರೂ ನಾವು ಬೇರೆಯಾಗಲ್ಲ ಎನ್ನುವ ಸಂದೇಶವನ್ನ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಈ ಯುವ ಜೋಡಿಯ ಜಾತಿ ಬೇರೆ ಬೇರೆ ಇರೋದ್ರಿಂದ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಸದ್ಯ ನ್ಯಾಯಾಲಯದ ಮೆಟ್ಟಿಲೇರಿದ್ದು ನವಜೋಡಿಗಳು ಜಯ ಸಿಗುವ ವಿಶ್ವಾಸದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *