ಎಂಜಿನಿಯರಿಂಗ್ ಓದಿದ್ರೂ ಕಬ್ಬಿನ ಹಾಲು ಮಾರಾಟ: ಕೆಲ್ಸ ಸಿಗದಿದ್ರೂ ಹಮ್ಮು, ಬಿಮ್ಮಿಲ್ಲದ ಸರದಾರ!

ಬಳ್ಳಾರಿ: ಎಂಜಿನಿಯರಿಂಗ್ ಓದಿದವರು ಎಂಜಿನಿಯರೇ ಆಗ್ಬೇಕು ಅಂತಾ ಆಸೆ ಪಡ್ತಾರೆ. ಕೆಲಸ ಸಿಗದಿದ್ರೆ ಕೆಲವರು ಬೇಸರ ಮಾಡಿಕೊಂಡು, ಆತ್ಮಹತ್ಯೆ ಹಾದಿ ಹಿಡೀತಾರೆ. ಆದರೆ ಬಳ್ಳಾರಿಯ ಈ ನಮ್ಮ ಹೀರೋ ಕೆಲಸ ಸಿಗದಿದ್ರೂ ಪರವಾಗಿಲ್ಲ ಅಂತಾ ಕಬ್ಬಿನ ಹಾಲು ಮಾರಿ ಬದುಕು ಕಟ್ಟಿಕೊಂಡಿದ್ದಾರೆ.

ಇವರ ಹೆಸರು ಗೋಪಾಲ ದಾಸರ. ಶ್ರೀಕೃಷ್ಣ ಪರಮಾತ್ಮನಿಗೆ ಹಾಲು, ಬೆಣ್ಣೆ ಅಂದ್ರೆ ಎಷ್ಟು ಇಷ್ಟವೋ ಇವರಿಗೂ ಸಹ ಕಬ್ಬಿನ ಹಾಲು ಅಂದ್ರೆ ಅಷ್ಟೇ ಇಷ್ಟ. ಅದಕ್ಕೆ ಕಬ್ಬಿನ ಹಾಲು ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಗೋಪಾಲ ದಾಸರ ಡಿಪ್ಲೊಮೋ ಜೊತೆ ಸಿವಿಲ್ ಎಂಜಿನಿಯರಿಂಗ್ ಓದಿದ್ರೂ ಕೆಲಸ ಸಿಕ್ಕಿಲ್ಲ. ಹಾಗಂತ ಇವರು ಬೇಜಾರು ಮಾಡಿಕೊಳ್ಳಲಿಲ್ಲ. ಅಪ್ಪ, ಅಮ್ಮ ಶುರು ಮಾಡಿದ್ದ ಕಬ್ಬಿನ ಹಾಲಿನ ವ್ಯಾಪಾರವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಅಮ್ಮನ ಹೆಸರಿನಲ್ಲಿ 50 ಸಾವಿರ ರೂಪಾಯಿ ಸಾಲ ಮಾಡಿ ಹೊಸ ಯಂತ್ರ ಖರೀದಿ ಮಾಡಿದ್ದಾರೆ. ಈಗ ಕಾಂಕ್ರೀಟ್ ಟೆಕ್ನಾಲಜಿಯಲ್ಲಿ ಎಂಟೆಕ್ ಮಾಡಬೇಕೆಂಬ ಆಸೆಯಲ್ಲಿದ್ದಾರೆ. ಜೊತೆಗೆ ಕೆಎಎಸ್ ಅಥವಾ ಐಎಎಸ್ ಮಾಡುವ ಉತ್ಸಾಹ ಹೊಂದಿದ್ದಾರೆ.

ಗೋಪಾಲ ತಾವಷ್ಟೇ ಅಲ್ಲ, ಬಿಕಾಂ ಓದಿರೋ ತನ್ನ ಸಹೋದರ ಶ್ರೀನಿವಾಸಗೂ ಕಬ್ಬಿನ ಹಾಲು ಮಾರಾಟ ಮಾಡೋದನ್ನ ಕಲಿಸಿಕೊಟ್ಟು ಜೀವನ ರೂಪಿಸಿದ್ದಾರೆ. ಇವರ ಈ ಸಾಧನೆ ನಿರುದ್ಯೋಗಿಗಳಿಗೆ ಮಾದರಿಯಾಗಿದೆ.

ನಾನು ತುಂಬಾ ಓದಿದ್ದೀನಿ. ಸಣ್ಣ ಪುಟ್ಟ ಕೆಲಸ ಬೇಡ ಅನ್ನೋ ನೂರಾರು ಯುವಕರಿಗೆ ಗೋಪಾಲ ಮಾದರಿಯಾಗಿದ್ದಾರೆ. ಇಂಥ ಸ್ವಾವಲಂಬಿಗೆ ನಮ್ಮದೊಂದು ಸಲಾಂ.

Comments

Leave a Reply

Your email address will not be published. Required fields are marked *