ತಾಯಿ ಮೇಲಿನ ಕೋಪಕ್ಕೆ ಮಗುವನ್ನು ಹತ್ಯೆಗೈದು ಸಂಪಿಗೆ ಎಸೆದನಾ ಪಕ್ಕದ ಮನೆಯ ವ್ಯಕ್ತಿ?

ಬೆಂಗಳೂರು: ತಾಯಿ ಮೇಲಿನ ಕೋಪಕ್ಕೆ ಪಕ್ಕದ ಮನೆಯ ವ್ಯಕ್ತಿಯೊಬ್ಬ ಮಗುವನ್ನು ಹತ್ಯೆಗೈದು ಬಳಿಕ ಸಂಪಿಗೆ ಎಸೆದ ಘಟನೆ ಬೆಂಗಳೂರಿನ ಬಿಳೇಕಹಳ್ಳಿ ಬಳಿ ನಡೆದಿದೆ.

6 ವರ್ಷ ವಯಸ್ಸಿನ ಮನೋಜ್ ಕುಮಾರ್ ಮೃತ ಬಾಲಕ. ಸಂಪಿನಲ್ಲಿ ಬಾಲಕ ಮನೋಜ್ ಕುಮಾರ್ ಶವ ಪತ್ತೆಯಾಗಿದೆ. ಕೊಲೆ ಮಾಡಿ ಸಂಪಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ನೆರೆ ಮನೆಯ ಮಹೇಶ್ ಎಂಬಾತನ ಮೇಲೆ ಸಂಶಯ ವ್ಯಕ್ತವಾಗುತ್ತಿದೆ. ಕ್ಷುಲ್ಲಕ ವಿಚಾರಕ್ಕೆ ಮನೋಜ್ ತಾಯಿ ಹಾಗೂ ಮಹೇಶ್ ನಡುವೆ ಜಗಳವಾಗಿತ್ತು. ಹೀಗಾಗಿ ತಾಯಿ ಮೇಲಿನ ಕೋಪಕ್ಕೆ ಮಗನ ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಇಂದು ಮುಂಜಾನೆ 8 ಗಂಟೆಯ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಮಗು ಆಟವಾಡುತ್ತಿದ್ದ ಸಂದರ್ಭದಲ್ಲಿ ಆರೋಪಿ ಕರೆದುಕೊಂಡು ಹೋಗಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪಕ್ಕದಲ್ಲಿರೋ ನಿರ್ಮಾಣ ಹಂತದ ಕಟ್ಟಡದ ಖಾಲಿ ಇರೋ ಸಂಪಿಗೆ ಎಸೆದು ಹೋಗಿದ್ದಾನೆ ಎನ್ನಲಾಗಿದೆ. ಇತ್ತ ಮಗು ಕಾಣದಾಗ ಪೋಷಕರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಸಂಪಿನಲ್ಲಿ ಮಗನ ಶವ ಪತ್ತೆಯಾಗಿದ್ದು, ಕೂಡಲೇ ಮಗುವಿನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಮೈಕೋ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ನೆರಮನೆಯ ಮಹೇಶ್‍ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.youtube.com/watch?v=UnciRuwp7GU

Comments

Leave a Reply

Your email address will not be published. Required fields are marked *