ಕೆಟ್ಟ ಕಾಫಿ ಕೊಟ್ಟದ್ದಕ್ಕೆ ಕೆನ್ನೆಗೆ ಏಟು: ಪತ್ನಿಯನ್ನು ಕೊಂದ ಪತಿ ಅರೆಸ್ಟ್

ಚಾಮರಾಜನಗರ: ಕೆಟ್ಟ ಕಾಫಿ ಕೊಟ್ಟಿದ್ದೀಯಾ ಎಂದು ಪತಿಯೊಬ್ಬ ಪತ್ನಿಯ ಕೆನ್ನೆ ಹೊಡೆದು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೆಲಂಬಳ್ಳಿ ಗ್ರಾಮದಲ್ಲಿ ಜರುಗಿದೆ.

ಮಮತಾ (24) ಕೊಲೆಯಾದ ಮಹಿಳೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಶಿವಕುಮಾರ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ವ್ಯವಸಾಯ ಮಾಡುತ್ತಿರುವ ಶಿವಕುಮಾರ್ ಮಮತಾ ದಂಪತಿಗೆ ಎರಡು ಗಂಡು ಮಕ್ಕಳಿದ್ದು, ಇಂದು ಬೆಳಗ್ಗೆ ಒಬ್ಬ ಮಗನನ್ನು ಶಿವಕುಮಾರ್ ಶಾಲೆಗೆ ಬಿಟ್ಟು ಮನೆಗೆ ಬಂದಿದ್ದಾನೆ. ಬೆಳಿಗ್ಗೆ ತಿಂಡಿ ತಿನ್ನುವ ವೇಳೆ ಮಮತಾ ನಿನ್ನೆಯ ಹಾಲನ್ನು ಹಾಕಿ ಕಾಫಿ ಮಾಡಿಕೊಟ್ಟಿದ್ದಾರೆ.

ಕಾಫಿಯನ್ನು ಕುಡಿದ ಕೂಡಲೇ ಸಿಟ್ಟಾದ ಶಿವಕುಮಾರ್ ಕೆಟ್ಟ ಕಾಫಿ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ, ಅಲ್ಲೇ ಪತ್ನಿಯ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಈ ಪೆಟ್ಟನ್ನು ತಾಳಲಾರದೇ ಮಮತಾ ಅಲ್ಲೇ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪತ್ನಿ ಸಾವನ್ನಪ್ಪಿದ್ದನ್ನು ತಿಳಿದ ಶಿವಕುಮಾರ್ ಯಾರಿಗೂ ನನ್ನ ಮೇಲೆ ಅನುಮಾನ ಬಾರದೇ ಇರಲೆಂದು ಶವವನ್ನು ಸೀರೆ ಬಳಸಿ ಮೇಲಕ್ಕೆ ಕಟ್ಟಿ ಮನೆಯಿಂದ ಕಾಲ್ಕಿತ್ತಿದ್ದಾನೆ.

ಬೆಳಕಿಗೆ ಬಂದಿದ್ದು ಹೇಗೆ?
ಸಂಜೆ ವೇಳೆ ಮಮತಾ ಮನೆಗೆ ಪರಿಚಯಸ್ಥರು ಹೋಗಿದ್ದಾರೆ. ಈ ವೇಳೆ ಒಳಗಡೆ ಶವ ನೇತಾಡುತ್ತಿರುವುದನ್ನು ನೋಡಿ ಕೂಡಲೇ ಮಮತಾ ಪೋಷಕರಿಗೆ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪತಿ ಶಿವಕುಮಾರ್‍ಗೂ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬಂದು ಆತ್ಮಹತ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಪರಿಚಯದ ವ್ಯಕ್ತಿಗಳು ದಂಪತಿ ಮಧ್ಯೆ ಕೌಟುಂಬಿಕ ವಿಚಾರದ ಬಗ್ಗೆ ಗಲಾಟೆ ನಡೆಯುತ್ತಲೇ ಇತ್ತು ಎನ್ನುವುದನ್ನು ತಿಳಿಸಿದ್ದಾರೆ. ಈ ವಿಚಾರ ತಿಳಿದು ಪೊಲೀಸರು ಮತ್ತು ಪೋಷಕರಿಗೆ ಅನುಮಾನ ಬಂದು ಮತ್ತಷ್ಟು ಪ್ರಶ್ನೆ ಕೇಳಿದಾಗ ಶಿವಕುಮಾರ್ ನಡೆದ ಘಟನೆಯನ್ನು ವಿವರಿಸಿದ್ದಾನೆ ಎಂದು ಮಮತಾ ಸಹೋದರ ಪುನೀತ್ ಹೇಳಿದ್ದಾರೆ.

ವಿಚಾರ ತಿಳಿದ ಮಮತಾ ಪೋಷಕರು ಶಿವಕುಮಾರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಶಿವಕುಮಾರ್‍ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *