13ರ ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಈತನನ್ನ ಹಿಡಿಯಲು ಪೊಲೀಸರು ಮಾಡಿದ್ರು ಸಖತ್ ಪ್ಲಾನ್

ಮುಂಬೈ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನ ಹಿಡಿಯುವುದು ಇಲ್ಲಿನ ನೆಹರು ನಗರ ಪೊಲೀಸರಿಗೆ ಅಷ್ಟೊಂದು ಸುಲಭವಾಗಿರಲಿಲ್ಲ. ಹೀಗಾಗಿ ಒಂದೊಳ್ಳೆ ಐಡಿಯಾ ಮಾಡಿ ಈಗ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

22 ವರ್ಷದ ರಾಜು ಅಲಿಯಾಸ್ ನವೇರ್ ಶೇಕ್ ಬಂಧಿತ ಆರೋಪಿ. ಈತ ಫೆಬ್ರವರಿಯಲ್ಲಿ ತನ್ನ ನೆರೆಮನೆಯಲ್ಲಿ ವಾಸವಿದ್ದ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಬಿಹಾರಕ್ಕೆ ಪರಾರಿಯಾಗಿದ್ದ. ಪೊಲೀಸರು ಈತನಿಗಾಗಿ ತಿಂಗಳುಗಳ ಕಾಲ ಹುಡುಕಾಟ ನಡೆಸಿ ಇದೀಗ ಕಳೆದ ಮಂಗಳವಾರ ಈತನನ್ನು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ. ಬಂಧಿತನನ್ನ ಶನಿವಾರದಂದು ಕುರ್ಲಾ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸರು ದಾಖಲಿಸಿಕೊಂಡಿದ್ದ ದೂರಿನ ಪ್ರಕಾರ ಈತ ತನ್ನ ನೆರೆಮನೆಯ ಬಾಲಕಿ ಒಬ್ಬಳೇ ಮನೆಯಲ್ಲಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಘಟನೆ ನಂತರ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಾಲಕಿಯ ತಾಯಿಗೆ ಬೆದರಿಕೆ ಹಾಕಿದ್ದ. ಬೆದರಿಕೆಯ ನಂತರವೂ ಬಾಲಕಿಯ ತಾಯಿ ನೆಹರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಪೊಲೀಸರು ಆರೋಪಿಯ ಮನೆ ತಲುಪುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ.

ನಂತರ ಪೊಲೀಸರು ಸಹಾಯಕ ಪೊಲೀಸ್ ಆಯುಕ್ತ ಗೌತಮ್ ಲಕ್ಷ್ಮೀ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ರು. ಮೊದಲಿಗೆ ಈ ತಂಡ ಆರೋಪಿ ಶೇಕ್‍ನ ಗೆಳೆಯನನ್ನ ಸಂಪರ್ಕಿಸಿದ್ರು. ಆರೋಪಿ ಶೇಕ್ ಬಿಹಾರದ ಸಿವಾನ್ ಜಿಲ್ಲೆಯಲ್ಲಿರುವ ತನ್ನ ಗೆಳೆಯನೊಂದಿಗೆ ನರಂತರವಾಗಿ ಸಂಪರ್ಕದಲ್ಲಿದ್ದ ಎಂಬುದು ತನಿಖೆ ವೇಳೆ ನಮಗೆ ಗೊತ್ತಾಯಿತು. ಹೀಗಾಗಿ ಸ್ನೇಹಿತನನ್ನು ಪತ್ತೆ ಮಾಡಲು ಒಂದು ತಂಡವನ್ನು ಸಿವಾನ್‍ಗೆ ಕಳಿಸಿದೆವು ಎಂದು ಪೊಲೀಸರು ಹೇಳಿದ್ದಾರೆ.

ಜಾಕ್‍ಪಾಟ್ ಬಂದಿದೆ ಎಂದು ನಂಬಿದ ಸ್ನೇಹಿತ: ಮುಂಬೈ ಪೊಲೀಸರು ಮಹಿಳೆಯೊಬ್ಬರ ಸಹಾಯ ಪಡೆದು ಆರೋಪಿ ಶೇಕ್‍ನ ಗೆಳೆಯನಿಗೆ ಫೋನ್ ಮಾಡಿಸಿದ್ರು. ಲಕ್ಕಿ ಡ್ರಾನಲ್ಲಿ ನಿಮ್ಮ ನಂಬರ್ ಆಯ್ಕೆ ಆಗಿದೆ. ನಿಮಗೆ ಬಹುಮಾನ ಬಂದಿದೆ ಎಂದು ಮಹಿಳೆ ಆತನಿಗೆ ಹೇಳಿದ್ರು. ಇದನ್ನ ನಂಬಿದ ಆತ ಬಹುಮಾನ ಸ್ವೀಕರಿಸಲು ಮಹಿಳೆಯನ್ನ ಭೇಟಿಯಾಗೋದಕ್ಕೆ ಒಪ್ಪಿದ್ದ. ನಂತರ ಸಿವಾನ್‍ನ ಮಾರುಕಟ್ಟೆ ಬಳಿ ಬಂದಾಗ ಆತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ರು. ಸ್ಥಳೀಯ ಪೊಲೀಸ್ ಠಾಣೆಗೆ ಆತನನ್ನು ಕರೆದುಕೊಂಡುಹೋಗಿ ವಿಚಾರಣೆ ನಡೆಸಿದಾಗ ಆತ ಆರೋಪಿ ಶೇಕ್ ಎಲ್ಲಿದ್ದಾನೆ ಎಂಬುದನ್ನ ಬಾಯ್ಬಿಟ್ಟ. ನಂತರ ಅಧಿಕಾರಿಗಳು ಆತನಿಂದ ಶೇಕ್‍ಗೆ ಫೋನ್ ಮಾಡಿಸಿ ಭೇಟಿಯಾಗುವಂತೆ ಹೇಳಿಸಿದ್ರು. ನಂತರ ಸ್ನೇಹಿತನನ್ನು ಭೇಟಿಯಾಗಲು ಬಂದ ಆರೋಪಿ ಶೇಕ್‍ನನ್ನ ಪೊಲೀಸರು ಬಂಧಿಸಿದ್ರು.

ಆರೋಪಿ ಶೇಕ್‍ನನ್ನು ವಿಚಾರಣೆ ಮಾಡಿದಾಗ, ಘಟನೆಯ ನಂತರ ಸೂರತ್‍ಗೆ ಪರಾರಿಯಾಗಿದ್ದು ಅಲ್ಲಿಂದ ಉತ್ತರಪ್ರದೇಶ ನಂತರ ಗೆಳೆಯನ ಸಂಪರ್ಕ ಸಿಕ್ಕಿದ ಮೇಲೆ ಸಿವಾನ್‍ಗೆ ಹೋಗಿದ್ದಾಗಿ ಬಾಯ್ಬಿಟ್ಟಿದ್ದಾನೆ. ನಕಲಿ ಹೆಸರು ಬಳಸಿ ಪಾಸ್‍ಪೋರ್ಟ್ ಮಾಡಿಸಿಕೊಳ್ಳಲು ಯತ್ನಿಸಿ ವಿಫಾಲವಾಗಿದ್ದಾಗಿ ತಿಳಿಸಿದ್ದಾನೆ. ಈತ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹುಡುಗಿಯರನ್ನ ಮೆಚ್ಚಿಸಲು ನಕಲಿ ಮಾಹಿತಿಗಳನ್ನ ಹಾಕಿದ್ದು, ಇತರೆ ಪ್ರಕರಣಗಳಲ್ಲೂ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Comments

Leave a Reply

Your email address will not be published. Required fields are marked *