ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧಾರ- ಕುತೂಹಲ ಮೂಡಿಸಿದೆ ಜೆಡಿಎಸ್ ನಡೆ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯದ ಕ್ಲೈಮ್ಯಾಕ್ಸ್ ಇಂದು ನಡೆಯಲಿದ್ದು, ಕ್ಷಣಕ್ಷಣಕ್ಕೂ ರಾಜಕೀಯ ಲೆಕ್ಕಾಚಾರ ಬದಲಾಗ್ತಿದೆ. ಮುಖಭಂಗದಿಂದ ಪಾರಾಗಲು ಕಾಂಗ್ರೆಸ್ ಪಾಳಯದಿಂದ ಹೊಸ ದಾಳ ಉರುಳಿದೆ. ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ನೀಡಲು ಕಾಂಗ್ರೆಸ್ ಮುಂದಾಗಿದ್ದು, ಬಸವರಾಜ ಹೊರಟ್ಟಿಗೆ ನೀಡಲು ಸಮ್ಮತಿಸಿದೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ಕರೆಮಾಡಿ ಸಭಾಪತಿ ಶಂಕರಮೂರ್ತಿ ಅವರನ್ನ ಕೆಳಗಿಳಿಸಲು ಜೆಡಿಎಸ್ ಬೆಂಬಲ ಕೋರಿದ್ದಾರೆ. ಕಾಂಗ್ರೆಸ್ ನಿರ್ಣಯವನ್ನು ಬೆಂಬಲಿಸುವಂತೆ ಜೆಡಿಎಸ್‍ಗೆ ಸಚಿವ ಪರಮೇಶ್ವರ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಿರ್ಣಯ ಏನು? ಎಂಬ ಕುತೂಹಲ ಮೂಡಿಸಿದೆ

ಜೆಡಿಎಸ್ ಬೆಂಬಲ ನಮಗೇ ಇದೇ ಎಂದು ಸಭಾಪತಿ ಡಿಹೆಚ್ ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಬೆಂಬಲ ಬಿಜೆಪಿಗೆ ಎಂದು ಕುಮಾರಸ್ವಾಮಿಯವರೇ ಹೇಳಿರುವಾಗ ಗೊಂದಲ ಏಕೆ ಎಂದು ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಸ್‍ಗೆ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ತೀವ್ರ ಆಕ್ರೋಶ ಹೊರಹಾಕಿದ್ದಾರೆ

ಕಾಂಗ್ರೆಸ್ ಸದಸ್ಯರ ಅವಿಶ್ವಾಸ ನಿರ್ಣಯದ ಬಳಿಕ ಮತದಾನ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಮೂರು ಪಕ್ಷಗಳು ಸದನದಲ್ಲಿ ಕಡ್ಡಾಯವಾಗಿ ಇಂದು ಹಾಜರಿರುವಂತೆ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಈವರೆಗೂ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಜೆಡಿಎಸ್ ಶಾಸಕರಿಗೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೂಚಿಸಿಲ್ಲ. ಹೀಗಾಗಿ ಇಂದು ಪರಿಷತ್ ನಲ್ಲಿ ಬೇರೆ ಹೈಡ್ರಾಮಾ ನಡೆದರೂ ಅಚ್ಚರಿ ಪಡಬೇಕಿಲ್ಲ. ಸಂಖ್ಯಾಬಲದ ಪ್ರಕಾರ ಬಿಜೆಪಿ- ಜೆಡಿಎಸ್ ದೋಸ್ತಿ ಮುಂದುವರೆದ್ರೆ ಬಿಜೆಪಿಗೆ ಯಾವುದೇ ಆತಂಕವಿಲ್ಲ. ಒಂದು ವೇಳೆ ಜೆಡಿಎಸ್ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದರೆ ಬಿಜೆಪಿಯಿಂದ ಸಭಾಪತಿ ಸ್ಥಾನ ಕೈ ತಪ್ಪಲಿದೆ.

ಇವತ್ತಿನ ಪರಿಷತ್ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಿಂಗ್ ಮೇಕರ್. ಸದ್ಯ 5 ಪಕ್ಷೇತರರ ಪೈಕಿ ಮೂರು ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದು, ಇಬ್ಬರು ಬಿಜೆಪಿ ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಇಬ್ಬರಲ್ಲಿ ಒಬ್ಬರು ಹಿಂದೆ ಸರಿದರೂ ಬಿಜೆಪಿಗೆ ಸಭಾಪತಿ ಸ್ಥಾನ ಮಿಸ್ ಆಗಲಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳು ಇಂದಿನ ಮತದಾನದಲ್ಲಿ ಕಿಂಗ್ ಮೇಕರ್ ಸ್ಥಾನ ಅಲಂಕರಿಸಿದ್ದಾರೆ.

ಪರಿಷತ್ ನಲ್ಲಿ ಒಟ್ಟಾರೆ 75 ಸದಸ್ಯರು ಇದ್ದಾರೆ. ಇತ್ತೀಚೆಗೆ ನಿಧನರಾದ ಬಿಜೆಪಿಯ ವಿಮಲಗೌಡರ ಸ್ಥಾನ ಹೊರತುಪಡಿಸಿದ್ರೆ ಒಟ್ಟಾರೆ ಸದನದಲ್ಲಿ ಸದ್ಯ ಸಂಖ್ಯಾಬಲ 74 ಆಗಲಿದೆ. ಇದರ ಅನ್ವಯ ಸರಳ ಬಹುಮತಕ್ಕೆ 38 ಸ್ಥಾನಗಳು ಅವಶ್ಯಕವಾಗಿದೆ. ಸದ್ಯ ಸದನದಲ್ಲಿ ಕಾಂಗ್ರೆಸ್ 33 , ಬಿಜೆಪಿ 22, ಜೆಡಿಎಸ್ 13 ,ಪಕ್ಷೇತರರು 5 ಸ್ಥಾನಗಳಿವೆ. ಸಭಾಪತಿಗಳ ಒಂದು ಸ್ಥಾನ ಇದೆ. ಕಾಂಗ್ರೆಸ್ ಜೊತೆ ಪಕ್ಷೇತರ ಮೂರು ಸದಸ್ಯರು ಗುರುತಿಸಿಕೊಂಡಿದ್ದು 33 ಕಾಂಗ್ರೆಸ್ ಸದಸ್ಯರ ಜೊತೆ 3 ಪಕ್ಷೇತರರು ಸೇರಿದ್ರೆ ಒಟ್ಟು 36 ಸ್ಥಾನವಾಗಲಿದೆ. ಇನ್ನು ಇಬ್ಬರು ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ 33 + ಜೆಡಿಎಸ್ 13 ಸೇರಿ ಒಟ್ಟು 37 ಸ್ಥಾನವಾಗಲಿದೆ. ಸಭಾಪತಿಗಳು ಬಿಜೆಪಿಯವರಾಗಿರೋದ್ರಿಂದ ಅವರ ಮತ ಬಿಜೆಪಿಗೆ ಸಿಗಲಿದ್ದು ಒಟ್ಟಾರೆ 38 ಸ್ಥಾನಗಳ ಮೂಲಕ ಬಿಜೆಪಿಗೆ ಸಭಾಪತಿ ಸ್ಥಾನ ದೊರೆಯಲಿದೆ.

Comments

Leave a Reply

Your email address will not be published. Required fields are marked *