ವಿಜಯಪುರ: ಅಲ್ಲಿ ಸುಂದರವಾಗಿ ಮದುವೆ ಸಮಾರಂಭ ಏರ್ಪಟ್ಟಿತ್ತು. ವಧುವರರ ಬಂಧುಗಳು, ವಾಲಗದವರು ರಾಗ ತಾಳದಲ್ಲಿ ತಲ್ಲಿನರಾಗಿ ಗಟ್ಟಿಮೇಳ ಬಾರಿಸುತ್ತಿದ್ದರೆ, ಬಾಣಸಿಗರು ನಾನಾ ಭಕ್ಷ್ಯಗಳ ತಯಾರಿಕೆಯಲ್ಲಿ ತೊಡಗಿದ್ದರು. ಹಿರಿಯರು ಇತರರ ಆಗಮನಕ್ಕಾಗಿ ಕೈಮುಗಿದು ಕರೆಯುತ್ತಿದ್ದರು. ಇಷ್ಟೆಲ್ಲಾ ನಡೆದಿದ್ದು ಗೊಂಬೆಗಳ ಮದುವೆ ಸಮಾರಂಭದಲ್ಲಿ.
ಹೌದು. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹುಲ್ಲೂರ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಸಡಗರ ಸಂಭ್ರಮದಿಂದ ಗೊಂಬೆಗಳ ಮದುವೆ ಮಾಡಿ ವರುಣ ದೇವನಲ್ಲಿ ಸಮೃದ್ಧವಾಗಿ ಮಳೆ ಸುರಿಯಲಿ ಎಂದು ಬೇಡಿಕೊಂಡರು.

ನಿಜವಾದ ಮದುವೆ ಸಮಾರಂಭ ಹೇಗೆ ನಡೆಯುತ್ತೋ ಹಾಗೆ ಇಲ್ಲಿಯೂ ನಡೆಯಿತು. ಆ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಎದಿರುಗೊಳ್ಳುವ ಶಾಸ್ತ್ರ ಮುಗಿದು ಮೆರವಣಿಗೆ ಮೂಲಕ ವಧುವನ್ನು ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಂದು ವಧುವರರ ಅರಿಷಿನ ಹಚ್ಚುವ, ಸುರಿಗೆ ಸುತ್ತುವ ಕಾರ್ಯ ನಡೆಯಿತು. ನಂತರ ಗರ್ಭ ಗುಡಿಯಲ್ಲಿ ದೇವರ ಅಕ್ಷತಾ ಕಾರ್ಯ ನಂತರ ದೇವಸ್ಥಾನದ ಹೊರ ಪ್ರದೇಶದಲ್ಲಿ ದೈವದ ಅಕ್ಷತಾ ಕಾರ್ಯ ನೆರವೇರಿತು.
ನಂತರ ಮದುವೆಗೆಂದು ಬಂದವೆರೆಲ್ಲ ಹುಗ್ಗಿ ಅನ್ನ ಸಾರು ಭೋಜನ ಸವಿದರು. ಮದುವೆಗೆ ಮಂಗಳ ಹಾಡಿದರು. ಅಶೋಕ ಬಾಲಪ್ಪಗೋಳ ವಧುವಿನ ತಂಡದ ಮುಖ್ಯಸ್ಥನಾಗಿದ್ದರೆ, ನೀಲಪ್ಪ ವರನ ತಂಡದ ಮುಖ್ಯಸ್ಥರಾಗಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಗೊಂಬೆ ಮದುವೆ ಸೇರಿದಂತೆ ಕತ್ತೆ, ಕಪ್ಪೆ, ಪನ್ನೊಳಿಗೆ, ಚಿಕ್ಕ ಮಕ್ಕಳ ಮದುವೆ ಹೀಗೆ ನಾನಾ ತರದಲ್ಲಿ ಮದುವೆಗಳನ್ನು ಮಾಡುತ್ತಾರಂತೆ.
ಹೀಗೆ ಕೆಲ ಗ್ರಾಮಗಳಲ್ಲಿ ಸುಮಾರು ವರ್ಷಗಳವರೆಗೆ ಮಳೆ ಬೀಳದಿದ್ದರೆ ಎಷ್ಟು ವರ್ಷಗಳಿಂದ ಮಳೆ ಬಿದ್ದಿರುವುದಿಲ್ಲವೋ ಅಷ್ಟು ವರ್ಷಗಳವರೆಗೆ ಮರಣ ಹೊಂದಿದವರ ಶವಗಳಿಗೆ ನೀರುಣಿಸುವ ಪದ್ದತಿ ಇದೆ ಎಂದು ಗ್ರಾಮದ ಕೆಲ ಹಿರಿಯರು ಹೇಳಿದ್ದಾರೆ.
ಗ್ರಾಮೀಣರ ನಾನಾ ಆಚರಣೆಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಎಂಬುದು ಹುಲ್ಲೂರು ಗ್ರಾಮದಲ್ಲಿ ಜರುಗಿದ ಗೊಂಬೆಗಳ ಮದುವೆ ಸಾಕ್ಷಿಯಾಗಿದೆ.


Leave a Reply