ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು 9 ವರ್ಷದ ಬಳಿಕ ಬೆಂಗಳೂರಿನಲ್ಲೇ ಆರಂಭಿಸ್ತಿರೋದು ಯಾಕೆ: ದಿನೇಶ್ ಗುಂಡೂರಾವ್ ಹೇಳ್ತಾರೆ

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ರಾಜಕೀಯ ಉದ್ದೇಶಕ್ಕೆ ಮತ್ತೆ ಆರಂಭ ಮಾಡುತ್ತಿಲ್ಲ. ಬದಲಾಗಿ ಬೆಂಗಳೂರು ಹೆಚ್ಚು ಬೆಳೆದ ನಗರವಾಗಿರುವ ಕಾರಣ ಈಗ ಮತ್ತೆ ಇಲ್ಲಿ ರೀ ಲಾಂಚ್ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆನ್‍ಲೈನ್ ಎಡಿಷನ್ ಹಾಗೂ ವೀಕ್ಲಿ ಒಂದು ಪ್ರಿಂಟ್ ಅಡಿಷನ್ ಮುದ್ರಣವಾಗಲಿದೆ. ಹೀಗಾಗಿ ಇದು ಚುನಾವಣೆಗಾಗಿ ಮಾಡುತ್ತಿರೋದಲ್ಲ. ರಾಜಕೀಯಕ್ಕೂ ಪತ್ರಿಕೆಗೂ ಯಾವುದೇ ಸಂಬಂಧವಿಲ್ಲ. ಜೂನ್ 12 ರಂದು ಬೆಂಗಳೂರಿನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಉಪ ರಾಷ್ಟ್ರಪತಿ ಹಮಿದ್ ಅನ್ಸಾರಿ ಅವರು ರೀ ಲಾಂಚ್ ಮಾಡಲಿದ್ದಾರೆ ತಿಳಿಸಿದರು.

ಕೇಂದ್ರದಿಂದ ತೇಜೋವಧೆ: ಹೆರಾಲ್ಡ್ ಕೇಸ್‍ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಮೇಲೆ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ಮೋದಿ ಸರ್ಕಾರ ತೇಜೋವಧೆ ಮಾಡೋದ್ರಲ್ಲಿ ನಂಬರ್ ಒನ್ ಆಗಿದೆ. ಆದರೆ ಇದೂವರೆಗೂ ಒಂದೇ ಒಂದು ಪ್ರಕರಣದಲ್ಲಿ ಆರೋಪ ಸಾಬೀತು ಮಾಡಿದ್ದಾರಾ? ರಾಬರ್ಟ್ ವಾದ್ರಾ ಕೇಸ್ 3 ವರ್ಷ ಆದರೂ ಯಾವುದೇ ದಾಖಲೆ ನೀಡಿಲ್ಲ. ಕಾಂಗ್ರೆಸ್ ಮುಖ್ಯಮಂತ್ರಿಗಳು, ಸಚಿವರುಗಳ ಮೇಲೆ ಐಟಿ ರೇಡ್ ಮಾಡಿಸ್ತಿದ್ದಾರೆ ಅಷ್ಟೇ ಎಂದು ಕೇಂದ್ರದ ವಿರುದ್ಧ ಅವರು ಕಿಡಿಕಾರಿದರು.

ಮೋದಿ ಸರ್ಕಾರ ದ್ವೇಷ ಸಾಧಿಸುವ ಸರ್ಕಾರ. ಜನರಿಗೆ ದಾರಿ ತಪ್ಪಿಸುವ ಸರ್ಕಾರ. ಏನ್ ಸಾಧನೆ ಮಾಡಿದ್ದೀವಿ ಅಂತ ಹೇಳೊಲ್ಲ. ಅನಾವಶ್ಯಕ ಮಾತು ಹಿಡಿದು ಚರ್ಚೆ ಮಾಡ್ತಿದೆ. ಬರೀ ಸ್ಲೋಗನ್, ಭಾಷಣ, ಮಾತು ಬಿಟ್ಟರೆ ದೇಶ ಏನು ಉದ್ಧಾರ ಆಗಿಲ್ಲ. ಹೆರಾಲ್ಡ್ ಕೇಸ್ ನಲ್ಲಿ ಒಂದೇ ಒಂದು ರೂಪಾಯಿ ವಂಚನೆ ಆಗಿಲ್ಲ. ಇದರ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಆಕಾಂಕ್ಷಿ ಅಲ್ಲ: ಸಚಿವ ಸಂಪುಟ ವಿಸ್ತರಣೆ ವಿಚಾರದ ಪ್ರತಿಕ್ರಿಯಿಸಿ, ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಇರೋ ಜಾಗದಲ್ಲೇ ಇರುತ್ತೇನೆ. ಮಂತ್ರಿ ಸ್ಥಾನ ನೀಡುವುದು, ಬಿಡುವುದು ಸಿಎಂ ಅವರಿಗೆ ಬಿಟ್ಟ ವಿಚಾರ. ನಾನು ಕಾರ್ಯಾಧ್ಯಕ್ಷನಾಗಿಯೇ ಮುಂದುವರೆಯುತ್ತೇನೆ. ಅಧಿವೇಶನ ಮುಗಿದ ಮೇಲೆ 3 ಸ್ಥಾನ ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.

ಲಕ್ನೋದಲ್ಲಿ 1938 ಸೆ.9ರಂದು ಜವಾಹರಲಾಲ್ ನೆಹರೂ ಅವರು ಇಂಗ್ಲಿಷ್ ದಿನಪತ್ರಿಕೆ ನ್ಯಾಷನಲ್ ಹೆರಾಲ್ಡ್ ಆರಂಭಿಸಿದ್ದರು. ಕಾಂಗ್ರೆಸ್ ಪಕ್ಷದ ಮಾಲೀಕತ್ವದಲ್ಲಿ ಬರುತ್ತಿದ್ದ ಈ ಪತ್ರಿಕೆ 2008ರಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಅದಕ್ಕೂ ಮುನ್ನ 1940ರಿಂದ 1979ರವರೆಗೆ ಇದು ಕಾರ್ಯಾಚರಿಸುತ್ತಿರಲಿಲ್ಲ. 2008ರಲ್ಲಿ ಕೊನೆಗೆ ಉಳಿದಿದ್ದ ದೆಹಲಿ ಆವೃತ್ತಿ ಕೂಡ ನಿಂತು ಹೋಗಿತ್ತು.

Comments

Leave a Reply

Your email address will not be published. Required fields are marked *