ಕಾರವಾರ: ರಾಷ್ಟ್ರೀಯ ಹೆದ್ದಾರಿ 66ರ ಕುಮಟಾ-ಅಂಕೋಲ ಹೆದ್ದಾರಿಯಲ್ಲಿ ಸರಕು ತುಂಬಿಕೊಂಡು ಬಂದ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಪೊಲೀಸ್ ಚೆಕ್ಪೋಸ್ಟ್ ಮೇಲೆ ಹರಿದು ಬಿದ್ದಿದ್ದು, ಚೆಕ್ಪೋಸ್ಟ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಅತಿ ವೇಗದಲ್ಲಿ ಬಂದ ಲಾರಿ ಚಾಲಕನ ನಿದ್ದೆಗಣ್ಣಿನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ. ಚೆಕ್ಪೋಸ್ಟ್ ಬಳಿಯೇ ಇದ್ದ ಪೊಲೀಸರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ದ್ವಿಮುಖ ರಸ್ತೆ ನಿರ್ಮಾಣವಾಗಿದ್ದು, ಒಂದು ಭಾಗ ಬಂದ್ ಮಾಡಲಾಗಿದೆ. ಆದರೆ, ವೇಗವಾಗಿ ಬರುವ ವಾಹನಗಳಿಗೆ ಈ ರಸ್ತೆಯಲ್ಲಿ ಸಾಗುವಾಗ ಅರ್ಥೈಸಿಕೊಳ್ಳಲು ಕಷ್ಟವಾಗುತ್ತದೆ. ಸಮರ್ಪಕ ನಾಮಫಲಕ ಇಲ್ಲದ ಕಾರಣ ಕನ್ಫೂಸ್ಗೆ ಒಳಗಾಗುವ ಸವಾರರು ಈ ಭಾಗದಲ್ಲಿ ಹೇಗೆ ಬೇಕೋ ಹಾಗೆ ನುಗ್ಗುತಿದ್ದಾರೆ. ಹೀಗಾಗಿ, ಈ ರೀತಿಯ ಘಟನೆ ನಡೆಯುತ್ತಿದ್ದು, ಈ ಅಪಘಾತಗಳಿಗೆ IRB ಕಂಪನಿ ನೇರ ಹೊಣೆ ಎಂಬುದು ಸ್ಥಳೀಯರ ಆರೋಪ.
ಸದ್ಯ ಘಟನೆ ಸಂಬಂಧ ಗೋಕರ್ಣ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
