ಕೆಲ್ಸ ಹುಡುಕಿಕೊಂಡು ಬೆಂಗ್ಳೂರಿಗೆ ಬಂದ ಮಂಗ್ಳೂರು ಯುವತಿಗೆ ನಕಲಿ ಹೆಚ್‍ಆರ್ ನಿಂದ ಲೈಂಗಿಕ ಕಿರುಕುಳ ಯತ್ನ

ಬೆಂಗಳೂರು: ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಯುವತಿಗೆ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರು ಮೂಲದ ಯುವತಿಯೊಬ್ಬರು ಬಿಕಾಂ ಮುಗಿಸಿ ಬ್ಯಾಂಕ್ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದರು. ಕಳೆದ ಸೋಮವಾರ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹುದ್ದೆಗಾಗಿ ಖಾಸಗಿ ಬ್ಯಾಂಕ್‍ವೊಂದರಲ್ಲಿ ಇಂಟರ್‍ವ್ಯೂ ಅಟೆಂಡ್ ಮಾಡಿದ್ದರು. ನಾಲ್ಕು ಸುತ್ತಿನ ಇಂಟರ್‍ವ್ಯೂ ನಲ್ಲಿ ಪಾಸ್ ಆಗಿದ್ದ ಯುವತಿ ಐದನೇ ಸುತ್ತು ಮುಗಿದ ಬಳಿಕ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.

ಈ ವೇಳೆ ಯುವತಿಗೆ ಅಪರಿಚಿತ ನಂಬರ್‍ನಿಂದ ಕರೆ ಬಂದಿತ್ತು. ನಾನು ಬ್ಯಾಂಕ್‍ನ ಹೆಚ್‍ಆರ್, ನನ್ನ ಹಸರು ರೋಹನ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಏನೋ ಮುಖ್ಯವಾದ ವಿಷಯ ಚರ್ಚಿಸಬೇಕು ಎಂದು ಹೇಳಿ ಯುವತಿಯನ್ನು ಬ್ಯಾಂಕಿನಿಂದ ಹೊಬರುವಂತೆ ಹೇಳಿದ್ದ. ಯುವತಿ ಹೊರಹೋದ ನಂತರ ಆ ವ್ಯಕ್ತಿ, ಅಂತಿಮ ಸುತ್ತಿನ ಇಂಟರ್‍ವ್ಯೂನಲ್ಲಿ ಫೇಲ್ ಆಗಿರುವುದಾಗಿ ಯುವತಿಗೆ ತಿಳಿಸಿದ್ದ.

ಫೇಲ್ ಆಗಿದ್ದರೂ ನೀವು ಕೆಲಸಕ್ಕೆ ಸೇರಬಹುದು ಎಂದು ಯುವತಿಗೆ ಅಮಿಷವೊಡ್ಡಿದ್ದ. ಈ ಬಗ್ಗೆ ಚರ್ಚೆ ಮಾಡುವುದಿದೆ ಮನೆಗೆ ಬನ್ನಿ ಎಂದು ಕರೆದಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಇಲ್ಲಿ ತುಂಬಾ ಟ್ರಾಫಿಕ್ ಇದೆ. ನಿಮ್ಮ ಧ್ವನಿ ಕೇಳಿಸುತ್ತಿಲ್ಲ. ಕಾರು ಹತ್ತಿ ಎಂದು ಕರೆದಿದ್ದ. ಆದ್ರೆ ಕಾರು ಹತ್ತಲು ಯುವತಿ ನಿರಾಕರಿಸಿದ್ದು, ಈ ವೇಳೆ ರೋಹನ್ ನಡುರಸ್ತೆಯಲ್ಲೇ ಯವತಿಯನ್ನ ಎಳೆದು ಕಾರಿನಲ್ಲಿ ಕೂರಿಸಲು ಮುಂದಾದ. ಆತನಿಂದ ತಪ್ಪಿಸಿಕೊಂಡು ಯುವತಿ ಕಚೇರಿಯೊಳಗೆ ತೆರಳಿದ್ರು. ಕಚೇರಿಯಲ್ಲಿ ವಿಚಾರಿಸಿದಾಗ ಆ ಹೆಸರಿನ ವ್ಯಕ್ತಿ ಕೆಲಸದಲ್ಲಿ ಇಲ್ಲ ಎಂಬುದು ಪತ್ತೆಯಾಗಿದೆ.

ಯುವತಿ ಅಂತಿಮ ಸುತ್ತಿನ ಸಂದರ್ಶನದಲ್ಲಿ ಆಯ್ಕೆಯಾಗಿರುವುದಾಗಿ ಬ್ಯಾಂಕ್‍ನವರು ತಿಳಿಸಿದ್ದಾರೆ. ಆದ್ರೆ ಯುವತಿ ಕೆಲಸವನ್ನ ನಿರಾಕರಿಸಿದ್ದಾರೆಂದು ವರದಿಯಾಗಿದೆ.

ಈ ಬಗ್ಗೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *