ಆ್ಯಸಿಡ್ ದಾಳಿಗೊಳಗಾದ ಯುವತಿಗೆ ಬಾಳುಕೊಟ್ಟಿತ್ತು ರಾಂಗ್ ನಂಬರ್!

ಮುಂಬೈ: ಮಿಸ್ ಕಾಲ್ ಗಳಿಂದ ಪ್ರೀತಿ-ಪೇಮಗಳು ಹುಟ್ಟಿ ಕ್ರಮೇಣ ಸಂಬಂಧ ಮುರಿದು ಹೋದ ಸುದ್ದಿಗಳನ್ನು ಕೇಳಿರ್ತಿವಿ. ಅಲ್ಲದೇ ಪ್ರೀತಿಸಿದವರು ಮದುವೆಯಾಗುವುದು ಕೇವಲ ಬೆರಳೆಣಿಕೆಯಷ್ಟು. ಆದ್ರೆ ಒಂದು  ರಾಂಗ್ ನಂಬರ್ ನಿಂದ ಆ್ಯಸಿಡ್ ದಾಳಿಗೊಳಗಾದ ಯುವತಿಯೊಬ್ಬಳಿಗೆ ಯುವಕನೊಬ್ಬ ಬಾಳು ನೀಡುವ ಮೂಲಕ ಮಾನವೀಯತೆ ಮೆರೆದ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮುಂಬೈಯ ಕಲ್ವಾದಲ್ಲಿರುವ 26 ವರ್ಷದ ಲಲಿತ ಬೆನ್‍ಬನ್ಸಿ ಎಂಬವರೇ ಆ್ಯಸಿಡ್ ದಾಳಿಗೊಳಗಾಗಿ ಇಂದು ತನ್ನ ಪ್ರಿಯತಮ ರವಿಶಂಕರ್ ಸಿಂಗ್ ಜೊತೆ ಹಸೆಮಣೆಯೇರಿದ್ದಾರೆ.

ಪ್ರೀತಿ ಹುಟ್ಟಿದ್ದು ಹೇಗೆ?: ಲಲಿತಾ ಅವರಿಗೆ 2012ರಲ್ಲಿ ಮದುವೆ ಮಾಡುವುದಾಗಿ ತೀರ್ಮಾನಿಸಿ ಯುವಕನೊಬ್ಬನನ್ನು ಗೊತ್ತು ಮಾಡಿದ್ದರು. ಆದರೆ ಮದುವೆಗೆ ಇನ್ನೇನು ವಾರವಿದೆ ಅಂದಾಗ ಲಲಿತಾಳ ಸಂಬಂಧಿಯೊಬ್ಬ, ವೈಯಕ್ತಿಕ ದ್ವೇಷದಿಂದ ಲಲಿತಾ ಮೇಲೆ ಆಸಿಡ್ ದಾಳಿ ನಡೆಸಿದ್ದ. ಇದರಿಂದ ಅವರ ಮುಖವೆಲ್ಲ ಸುಟ್ಟು ಹೋಗಿ ಮದುವೆಯೇ ಮುರಿದು ಬಿದ್ದಿತ್ತು.

ಹೀಗೆ ಮುಖವೆಲ್ಲ ಸುಟ್ಟು ಹೋಗಿದ್ದರಿಂದ ಮುಂಬೈ ಆಸ್ಪತ್ರೆಯೊಂದರಲ್ಲಿ 17 ಬಾರಿ ಲಲಿತಾ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಚಿಕಿತ್ಸೆ ಮುಂದುವರಿಯುತ್ತಿದ್ದಂತೆಯೇ 2 ತಿಂಗಳ ಹಿಂದೆ ಅವರಿಗೊಂದು ಮೊಬೈಲ್ ಸಂಖ್ಯೆಯಿಂದ ಕರೆ ಬಂದಿತ್ತು. ಆದ್ರೆ ಅದು ರಾಂಗ್ ನಂಬರ್ ಆಗಿತ್ತು. ಆ ಕ್ಷಣದಲ್ಲಿ ಲಲಿತಾ ಸಾರಿ ರಾಂಗ್ ನಂಬರ್ ಅಂತಾ ಹೇಳಿ ಫೋನ್ ಕುಕ್ಕಿದರು. ಆದ್ರೆ ಕ್ರಮೇಣ ಅವರಿಬ್ಬರ ಮಧ್ಯೆ ಮಾತುಕತೆ ಬೆಳೆದು ಪ್ರೇಮಾಂಕುರವಾಯಿತು. ಆ ಯುವಕನೇ ಇಂದು ಲಲಿತಾಳನ್ನು ವರಿಸಿದ ರವಿಶಂಕರ್ ಸಿಂಗ್.

ಅಂತೆಯೇ ಎಲ್ಲರಂತೆ ಪ್ರತಿನಿತ್ಯ ಮಾತುಕತೆ ನಡೆದು ಒಬ್ಬರನೊಬ್ಬರು ಅರ್ಥಮಾಡಿಕೊಂಡು ಮದುವೆಯಾಗಲು ನಿರ್ಧರಿಸಿದ್ದರು. ಲಿಲಿತಾ ಅದೃಷ್ಟ ಚೆನ್ನಾಗಿದೆ ಅಂತಾನೇ ಹೇಳಬಹುದು. ಯಾಕಂದ್ರೆ ಇಂದು ಅವರು ರವಿಶಂಕರ್ ನ ಬಾಳಸಂಗಾತಿಯಾಗಿದ್ದಾರೆ. ಸದ್ಯ ಈ ದಂಪತಿ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಇವರಿಬ್ಬರ ಲವ್ ಸ್ಟೋರಿ ವೈರಲ್ ಆಗಿದೆ. ಈ ಮದುವೆಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸಾಕ್ಷಿಯಾಗಿದ್ದಾರೆ. ಅಲ್ಲದೇ ಈ ಜೋಡಿಗೆ ನಟ ಥಾಣೆಯಲ್ಲಿ ಅಪಾರ್ಟ್‍ಮೆಂಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಾಂಗ್ ನಂಬರ್ ನನ್ನ ಜೀವನವನ್ನು ಬದಲಾಯಿಸುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಇಂದು ನಾನು ತುಂಬಾ ಖುಷಿಯಾಗಿದ್ದೇನೆ. ನಾನು ಎಂದಿಗೂ ವಿವಾಹವಾಗುತ್ತೇನೆ ಅಂತಾ ಭಾವಿಸಿರಲಿಲ್ಲ. ಸತ್ಯವನ್ನು ತಿಳಿದು ನನ್ನನ್ನು ಮದುವೆಯಾಗಲು ನಿರ್ಧರಿಸಿದ ರವಿಶಂಕರ್ ಗೆ ಹ್ಯಾಟ್ಸ್ ಆಫ್ ಅಂತಾ ಲಲಿತಾ ಖುಷಿ ವ್ಯಕ್ತಪಡಿಸಿದ್ದಾರೆ.

ರವಿಶಂಕರ್ ಅಂಥವರ ಸಂತತಿ ಸಾವಿರವಾಗಲಿ. ಅಸಹಾಯಕ ಹೆಣ್ಣು ಮಕ್ಕಳ ಬಾಳಲ್ಲಿ ಇಂತಹವರು ಪ್ರವೇಶಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *