Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

ಪ್ರತೀ ವರ್ಷ ಅಶ್ವಿನಿ ಮಾಸದ 9ನೇ ದಿನದಂದು ಅಂದ್ರೆ ಮಹಾನವಮಿಯಂದು ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಜಯದಶಮಿ ದಿನದಂದೂ ಆಯುಧ ಪೂಜೆಯನ್ನು ಮಾಡುತ್ತಾರೆ. 2025ರ ಆಯುಧ ಪೂಜೆಯನ್ನು (Ayudha Puja) ಅಕ್ಟೋಬರ್‌ 01ರ ಬುಧವಾರದಂದು ಆಚರಿಸಲಾಗುವುದು. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ದಿನ ನಾವು ಕೆಲಸ ಮಾಡಲು ಬಳಸುವ ವಸ್ತುಗಳನ್ನು, ಆಯುಧಗಳನ್ನು ಮತ್ತು ರಕ್ಷಾ ಕವಚಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದರ ಹಿಂದೆ ಪುರಾಣ ಪುಣ್ಯಕಥೆಗಳೂ ಇವೆ. ಅವುಗಳೇನೆಂಬುದನ್ನಿಲ್ಲಿ ತಿಳಿಯೋಣ…

ಈ ವರ್ಷ ಶುಭ ಮುಹೂರ್ತ ಎಷ್ಟೊತ್ತಿಗೆ?
ಈ ವರ್ಷ ಅಕ್ಟೋಬರ್‌ 1ರಂದು ಆಯುಧಪೂಜಾ ಹಬ್ಬ ಇರಲಿದ್ದು, ಇದಾದ ಮುರು ದಿನ ವಿಜಯದಶಮಿ ಆರಂಭವಾಗುತ್ತದೆ. ಈ ಬಾರಿ ಅಕ್ಟೋಬರ್‌ 1ರಂದು ಮಧ್ಯಾಹ್ನ 2:09 ರಿಂದ 2:57ರ ಸಂದರ್ಭ ಶುಭಮುಹೂರ್ತ ಇದೆ.

navratri special Ayudha Pooja What Is Its Significance

ಆಯುಧ ಪೂಜೆ ಮಹತ್ವ ಏನು?
ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಅಂದು ದಿನ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ, ಕ್ಷತ್ರಿಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಇವರು ವಿಜಯದಶಮಿಯ ಒಂದು ದಿನ ಮೊದಲು ಆಯುಧ ಪೂಜೆ ದಿನ ತಮ್ಮ ಯುದ್ಧ ಸಾಮಾಗ್ರಿಗಳನ್ನಿಟ್ಟು ಪೂಜೆಯನ್ನು ಮಾಡುತ್ತಿದ್ದರು. ಆಯುಧ ಪೂಜೆಯ ಮೂಲಕ ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯಿಯಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಈ ಪೂಜೆಯನ್ನು ಕೆಲಸ ಮತ್ತು ಜ್ಞಾನದ ಸಮನ್ವಯದ ಸಂಕೇತವೆಂದು ಪರಿಗಣಿಸಲಾಗಿದೆ.

ಆಯುಧ ಪೂಜೆ ವಿಧಾನ
ಆಯುಧ ಪೂಜೆಯ ದಿನದಂದು ಜನರು ತಮ್ಮ ಮನೆ, ಕೆಲಸದ ಸ್ಥಳ, ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಬಳಸುವ ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಪೂಜೆಗೆ ಅಲಂಕರಿಸುತ್ತಾರೆ. ವ್ಯಾಪಾರ ವರ್ಗದವರು ತಮ್ಮ ವ್ಯಾಪಾರ ಸಲಕರಣೆಗಳಾದ ಕಂಪ್ಯೂಟರ್, ಪೆನ್ನು, ಖಾತೆ ಪುಸ್ತಕ ಇತ್ಯಾದಿಗಳಿಗೆ ಪೂಜೆಯನ್ನು ಮಾಡುತ್ತಾರೆ ಮತ್ತು ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಸೈನಿಕರು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ.

MYSURU DASARA 4

ಅಂದು ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಅಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳನ್ನು ಇಡಲಾಗುತ್ತದೆ. ಇದರ ನಂತರ, ಪೂಜೆಯನ್ನು ನಡೆಸಲಾಗುತ್ತದೆ. ಅದರಲ್ಲಿ ಹೂವುಗಳು, ಧೂಪದ್ರವ್ಯಗಳು, ದೀಪಗಳು ಮತ್ತು ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ತೆಂಗಿನಕಾಯಿ, ಹೂವು, ಅರಿಶಿನ, ಕುಂಕುಮ ಮತ್ತು ಅಕ್ಷತೆಯನ್ನು ಅರ್ಪಿಸಿ ಆಯುಧಗಳು ಮತ್ತು ವಾದ್ಯಗಳನ್ನು ಪೂಜಿಸುತ್ತಾರೆ. ಪೂಜೆಯ ಸಮಯದಲ್ಲಿ, ವಾದ್ಯಗಳನ್ನು ಗೌರವಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ.

ಆಯುಧ ಪೂಜೆ ಕಥೆ
ಆಯುಧ ಪೂಜೆಗೆ ಸಂಬಂಧಿಸಿದ ದಂತಕಥೆಯ ಪ್ರಕಾರ, ದುರ್ಗಾದೇವಿಯು ತನ್ನ ರೌದ್ರ ರೂಪದಲ್ಲಿ ರಾಕ್ಷಸ ಮಹಿಷಾಸುರನನ್ನು ಸೋಲಿಸಿರುವ ದಿನವಾಗಿದೆ. ಎಲ್ಲಾ ದೇವತೆಗಳು ರಾಕ್ಷಸನನ್ನು ಸೋಲಿಸಲು ದುರ್ಗೆಗೆ ತಮ್ಮ ಆಯುಧಗಳು, ಪ್ರತಿಭೆ ಮತ್ತು ಶಕ್ತಿಗಳನ್ನು ನೀಡಿದರು. ಸಂಪೂರ್ಣ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು. ಮತ್ತು ನವಮಿಯ ಮುನ್ನಾದಿನದಂದು, ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುವ ಮೂಲಕ ಯುದ್ಧವನ್ನು ಮುಕ್ತಾಯಗೊಳಿಸಿದಳು. ಹೀಗಾಗಿ, ಆ ದಿನವನ್ನು ಮಹಾನವಮಿ ಎಂದು ಆಚರಿಸಲಾಗುತ್ತದೆ ಮತ್ತು ಆಯುಧ ಪೂಜೆಯ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ದುರ್ಗಾ ದೇವಿಯು ಬಳಸಿದ ಎಲ್ಲಾ ಆಯುಧಗಳು ಮತ್ತು ಉಪಕರಣಗಳು ತಮ್ಮ ಉದ್ದೇಶವನ್ನು ಸಾಧಿಸಿವೆ ಎನ್ನುವ ನಂಬಿಕೆಯಿದೆ. ಯುದ್ಧದ ನಂತರ ಆ ಆಯುಧಗಳನ್ನು ಗೌರವಿಸಲು ಎಲ್ಲಾ ಆಯುಧಗಳನ್ನು ಪೂಜಿಸಿ ಒಂದೆಡೆ ಇಟ್ಟು ಶುಚಿಗೊಳಿಸಿ ಅಲಂಕರಣ ಮಾಡಿದ ನಂತರ ಆಯಾ ದೇವರು ಮತ್ತು ದೇವತೆಗಳಿಗೆ ಅವುಗಳನ್ನು ಹಿಂದಿರುಗಿಸಲಾಯಿತು.