Madhya Pradesh | ತಾಯಿ ಎದುರೇ 5 ವರ್ಷದ ಮಗುವಿನ ಶಿರಚ್ಛೇದ

– ಕೊಲೆಗಾರನನ್ನ ಥಳಿಸಿಯೇ ಕೊಂದ ಗ್ರಾಮಸ್ಥರು

ಭೋಪಾಲ್‌: ಮಾನಸಿಕ ಅಸ್ವಸ್ಥ (Mentally Unstable) ಎಂದು ನಂಬಲಾದ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ತಾಯಿ ಎದುರಲ್ಲೇ 5 ವರ್ಷದ ಮಗುವಿನ ಶಿರಚ್ಛೇದ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ Madhya Pradesh) ನಡೆದಿದೆ.

5 ವರ್ಷದ ಮಗು ವಿಕಾಸ್‌ ಮೃತ ದುರ್ದೈವಿ, ಮಹೇಶ್ (25) ಹತ್ಯೆಗೈದ ಆರೋಪಿ. ಮಗುವನ್ನು ಹತ್ಯೆಗೈಯುವ ಮುನ್ನ ಅಂಗಡಿಯೊಂದರಿಂದ ವಸ್ತು ಖದಿಯಲು ಯತ್ನಿಸಿದ್ದ ಅಂತ ಗೊತ್ತಾಗಿದೆ.

ಏಕಾಏಕಿ ಮನೆಗೆ ನುಗ್ಗಿ ಶಿರಚ್ಛೇದ
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕೊಲೆಗಾರನನ್ನ ಇದುವರೆಗೆ ಆ ಕುಟುಂಬಸ್ಥರು ನೋಡಿದ್ದೇ ಇಲ್ಲ. ಏಕಾಏಕಿ ಬೈಕ್‌ನಲ್ಲಿ ಬಂದು ಮನೆಯೊಳಕ್ಕೆ ನುಗ್ಗಿದವನು, ಸಲಾಕೆ ತೆಗದುಕೊಂಡು ಮಗುವಿನ ತಲೆಗೆ ರಪ್ಪನೆ ಬಡಿದಿದ್ದಾನೆ, ಅಷ್ಟಕ್ಕೆ ಸುಮ್ಮನಾಗದೇ ಮಗುವಿನ ಗುತ್ತಿಗೆ ಹಿಡಿದು ತಲೆಯನ್ನ ಕತ್ತರಿಸಿದ್ದಾನೆ. ಮಗುವಿನ ಮೇಲೆ ಹಲ್ಲೆ ತಡೆಯಲು ಬಂದ ಪೋಷಕರ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿಸಿದ್ದಾರೆ.

ಬಳಿಕ ಪೋಷಕರ ಚೀರಾಟ ಕೇಳಿ ನೆರೆಹೊರೆಯವರು ಮನೆಯೊಳಗೆ ಧಾವಿಸಿದ್ದಾರೆ. ಕೃತ್ಯ ಕಂಡು ಗ್ರಾಮಸ್ಥರು ಆರೋಪಿಯನ್ನ ಚೆನ್ನಾಗಿ ಥಳಿಸಿದ್ದಾರೆ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಥಳಿತದಿಂದ ಸೀರಿಯಸ್‌ ಆಗಿದ್ದ ಆರೋಪಿಯನ್ನ ಆಸ್ಪತ್ರೆಗೆ ದಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

ಧಾರ್ ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ ಮಾತನಾಡಿ, ಇದು ಅತ್ಯಂತ ಹೃದಯ ವಿದ್ರಾವಕ ಘಟನೆ. ಗ್ರಾಮಸ್ಥರು ಕ್ರೋಧಗೊಂಡಿದ್ದರಿಂದ ಪೊಲೀಸರು ಬರೋ ಮೊದಲೇ ಆರೋಪಿಗೆ ಥಳಿಸಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಆತ ಸಾವನ್ನಪ್ಪಿದ್ದಾನೆ. ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಆರೋಪಿ ಮಹೇಶ್‌ ಅಲಿರಾಜ್‌ಪುರ ಜಿಲ್ಲೆಯ ಜೋಬತ್ ಬಾಗ್ಡಿ ಗ್ರಾಮದ ನಿವಾಸಿ, ಮಗು ಕೊಂದಿದ್ದಕ್ಕಾಗಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದ್ರೆ ಆತನ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕಿದೆ. ಈ ನಡುವೆ ಮಹೇಶ್‌ ಮಾನಸಿಕ ಅಸ್ವಸ್ಥನಾಗಿದ್ದು, ಮೂರ್ನಾಲ್ಕು ದಿನಗಳ ಹಿಂದೆ ಮನೆಯಿಂದ ಕಾಣೆಯಯಾಗಿದ್ದ ಎಂದು ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.