ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಘೋಷಣೆ, 30 ವರ್ಷದ ಬೇಡಿಕೆ ಈಡೇರಿಕೆ: ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ (Bengaluru-Mumbai Superfast Train) ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಮಾಹಿತಿ ನೀಡಿದ್ದಾರೆ. ಈ ಅನುಮೋದನೆಯಿಂದ ಎರಡೂ ನಗರಗಳ ನಾಗರಿಕರ 30 ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಸಂಭ್ರಮಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರು ‘ಬೆಂಗಳೂರು ಮತ್ತು ಮುಂಬೈ ನಡುವೆ ನಾವು ಶೀಘ್ರದಲ್ಲೇ ಸೂಪರ್‌ಫಾಸ್ಟ್ ರೈಲನ್ನು ಪ್ರಾರಂಭಿಸಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ಅವುಗಳ ನಿಲ್ದಾಣಗಳಲ್ಲಿನ ಸಾಮರ್ಥ್ಯದ ವಿಸ್ತರಣೆಯಿಂದಾಗಿ ಇದು ಈಗ ಸಾಧ್ಯವಾಗಿದೆ’ ಎಂದಿದ್ದಾರೆ ಎಂದು ತೇಜಸ್ವಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗಡಿ ಜಿಲ್ಲೆ ಬೀದರ್‌ನಲ್ಲಿ ಧಾರಾಕಾರ ಮಳೆಗೆ ಭಾರೀ ಅವಾಂತರ – ರಸ್ತೆ ಸಂಚಾರ ಬಂದ್‌

ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದರೂ, ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿದ್ದವು. ಆ ರೈಲು ಉದ್ಯಾನ ಎಕ್ಸ್‌ಪ್ರೆಸ್ ಆಗಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿದೆ. ಕಳೆದ ಮೂರು ದಶಕಗಳಲ್ಲಿ ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ, ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದು ಸೂಪರ್‌ಫಾಸ್ಟ್ ರೈಲು ಮಾತ್ರ ಇತ್ತು. ಕಳೆದ ವರ್ಷವೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಸೇವೆಯು ಲಕ್ಷಾಂತರ ನಾಗರಿಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಅನುಕೂಲಕರವಾಗಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

ಈ ವಿಷಯದ ಕುರಿತಾಗಿ ಕಳೆದ ನಾಲ್ಕು ವರ್ಷಗಳಿಂದ ಸಂಸತ್ತಿನಲ್ಲಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗಳಲ್ಲಿ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನದ ಫಲವಾಗಿದೆ. ಈ ಹೊಸ ರೈಲು ಪ್ರಯಾಣದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಿಮಾನ ಹಾಗೂ ಬಸ್‌ಗಳಿಗೆ ಆರಾಮದಾಯಕವಾದ ಪರ್ಯಾಯವನ್ನು ಒದಗಿಸುತ್ತದೆ. ಅಲ್ಲದೆ, ಇದು ಎರಡು ಮಹಾನಗರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಕರ್ನಾಟಕದ ಜನತೆ ಮತ್ತು ಕನ್ನಡಿಗರ ಪರವಾಗಿ, ಈ ಬಹುಕಾಲದ ಕನಸನ್ನು ನನಸಾಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತೇಜಸ್ವಿ ಸೂರ್ಯ ಕೃತಜ್ಞತೆಯನ್ನು ಸಲ್ಲಿಸಿದ್ದು, ಈ ಕಾರ್ಯಕ್ಕೆ ಬೆಂಬಲ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಧನ್ಯವಾದ ತಿಳಿಸಿದ್ದಾರೆ.‌ ಇದನ್ನೂ ಓದಿ: ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌