ಒಡಿಶಾ | 60,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗೆ ಮೋದಿ ಚಾಲನೆ

  • 97,500 4G ಮೊಬೈಲ್ ಟವರ್‌ಗಳಿಗೆ ಚಾಲನೆ
  • ರ‍್ಯಾಲಿಯಲ್ಲಿ ಮಕ್ಕಳು ತಂದ ಚಿತ್ರ ಸಂಗ್ರಹಿಸಲು ಸೂಚನೆ

ಭುವನೇಶ್ವರ್‌: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಒಡಿಶಾದ (Odisha) ಜಾರ್ಸುಗುಡದಲ್ಲಿ 60,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿದ್ದಾರೆ. ಈ ವೇಳೆ ಜನರನ್ನುದ್ದೇಶಿಸಿ ಮಾತನಾಡುವಾಗ ಮಕ್ಕಳು ಹಿಡಿದಿದ್ದ ಚಿತ್ರಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಧಾನಿಗಳು ಉದ್ಘಾಟಿಸಿದ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಅಭಿವೃದ್ಧಿ ಯೋಜನೆಗಳಲ್ಲಿ ದೂರಸಂಪರ್ಕ, ರೈಲ್ವೆ, ಉನ್ನತ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣ ವಸತಿ ಕ್ಷೇತ್ರಗಳು ಸೇರಿದಂತೆ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಸೇರಿವೆ. ಸ್ವದೇಶಿ ತಂತ್ರಜ್ಞಾನದೊಂದಿಗೆ ಸುಮಾರು 37,000 ಕೋಟಿ ರೂ. ವೆಚ್ಚದ 97,500 BSNL 4G ಮೊಬೈಲ್ ಟವರ್‌ಗಳನ್ನು (ಭಾರತದಾದ್ಯಂತ) ಉದ್ಘಾಟಿಸಿದ್ದಾರೆ.

ಡಿಜಿಟಲ್ ಭಾರತ್ ನಿಧಿಯಡಿಯಲ್ಲಿ 18,900 ಕ್ಕೂ ಹೆಚ್ಚು 4G ಸೈಟ್‌ಗಳಿಗೆ ಹಣಕಾಸಿನ ನೆರವು ನೀಡಲಾಗಿದೆ. ಇದರಿಂದ ಸುಮಾರು 26,700 ಸಂಪರ್ಕವಿಲ್ಲದ ಹಳ್ಳಿಗಳಿಗೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ. 20 ಲಕ್ಷಕ್ಕೂ ಹೆಚ್ಚು ಬಳಕೆದಾರರಿಗೆ ಇದರಿಂದ ಉಪಯೋಗವಾಗಲಿದೆ. ಈ ಟವರ್‌ಗಳು ಸೌರಶಕ್ತಿ ಚಾಲಿತವಾಗಿದ್ದು ಪರಿಸರ ಸ್ನೇಹಿಯಾಗಿವೆ.

ಸಂಬಲ್‌ಪುರ-ಸರ್ಲಾದಲ್ಲಿ ರೈಲು ಮೇಲ್ಸೇತುವೆಗೆ ಶಂಕು ಸ್ಥಾಪನೆ ನೆರವೇರಿದ್ದು, ಈ ಯೋಜನೆಗಳು ಒಡಿಶಾ ಮತ್ತು ನೆರೆಯ ರಾಜ್ಯಗಳಿಗೆ ಸರಕು ಸಾಗಾಟ ಮತ್ತು ಪ್ರಯಾಣಿಕರ ಸಂಚಾರ ಸುಗಮಗೊಳಿಸುತ್ತದೆ. ಸ್ಥಳೀಯ ಕೈಗಾರಿಕೆಗಳು ಮತ್ತು ವ್ಯಾಪಾರ ಅಭಿವೃದ್ಧಿ ಹೊಂದಲಿದೆ.

ಬೆರ್ಹಾಂಪುರ ಮತ್ತು ಉಧ್ನಾ (ಸೂರತ್) ನಡುವಿನ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ಗೆ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಈ ಯೋಜನೆ ರಾಜ್ಯದ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ. ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ರಾಜ್ಯದಲ್ಲಿ ಡಿಜಿಟಲ್ ಶಿಕ್ಷಣವನ್ನು ಹೆಚ್ಚಿಸಲು, ಪ್ರಧಾನಿ ಮೋದಿ 130 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವೈ-ಫೈ ಸೌಲಭ್ಯಗಕ್ಕೆ ಚಾಲನೆ ನೀಡಲಿದ್ದಾರೆ. ಇದರಿಂದ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಒಡಿಶಾದ ಜನರಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲು ಅಪಘಾತ ಆರೈಕೆ ಘಟಕಗಳು, ದಂತ ಕಾಲೇಜುಗಳು, ಮಾತೃ ಮತ್ತು ಮಕ್ಕಳ ಆರೈಕೆ ಘಟಕಗಳಿಗೆ ಚಾಲನೆ ನೀಡಲಿದ್ದಾರೆ.

ಅಂತ್ಯೋದಯ ಗೃಹ ಯೋಜನೆಯಡಿ 50,000 ಫಲಾನುಭವಿಗಳಿಗೆ ಮಂಜೂರಾತಿ ಆದೇಶಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯು ಅಂಗವಿಕಲರು, ವಿಧವೆಯರು, ಮಾರಕ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂತ್ರಸ್ತರು ಸೇರಿದಂತೆ ದುರ್ಬಲ ಗ್ರಾಮೀಣ ಕುಟುಂಬಗಳಿಗೆ ಮನೆ ಮತ್ತು ಆರ್ಥಿಕ ಸಹಾಯ ನೀಡಲಿದೆ.